ನವದೆಹಲಿ[ಜ.09]: ವಿಜಯಾ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕುಗಳೊಂದಿಗೆ ವಿಲೀನ ಮಾಡಿರುವುದನ್ನು ಮರುಪರಿಶೀಲಿಸಬೇಕು ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮುಂಬೈಯ ಸಂಸದ ಗೋಪಾಲ ಶೆಟ್ಟಿ ಅವರನ್ನೊಳಗೊಂಡ ನಿಯೋಗವು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿತು.

ವಿಜಯಾ ಬ್ಯಾಂಕ್‌ ಅನ್ನು ಸ್ವತಂತ್ರವಾಗಿಯೇ ಉಳಿಸಿಕೊಳ್ಳಬೇಕು ಅಥವಾ ವಿಲೀನಗೊಂಡು ರೂಪುಗೊಳ್ಳುವ ಬ್ಯಾಂಕ್‌ಗೆ ವಿಜಯಾ ಬ್ಯಾಂಕ್‌ ಎಂದು ನಾಮಕರಣ ಮಾಡಿ ವಿಜಯಾ ಬ್ಯಾಂಕಿನ ಹೆಸರನ್ನು ಉಳಿಸಿಕೊಡುವಂತೆ ಸಂಸದರು ಸಚಿವರಲ್ಲಿ ಕೋರಿದ್ದಾರೆ. ತಮ್ಮ ಮನವಿಗೆ ಹಣಕಾಸು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ನಳಿನ್‌ ಕುಮಾರ್‌ ಕಟೀಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.