ಬೆಂಗಳೂರು :  ರಾಜ್ಯ ಮೈತ್ರಿ ಸರ್ಕಾರಕ್ಕೆ ಸಡ್ಡು ಹೊಡೆದು ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ನೂತನ ಸಂಸದೆ ಸುಮಲತಾ ಅಂಬರೀಶ್‌ ಅವರಿಗೆ ಇದೀಗ ರೈತರ ಬೆಳೆಗೆ ನೀರು ಬಿಡುಗಡೆಗೊಳಿಸುವ ಮೊದಲ ಸವಾಲು ಎದುರಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಸ್ಥಳೀಯ ಮಟ್ಟದಲ್ಲಿಯೂ ಜೆಡಿಎಸ್‌ ಎಂಬ ಭದ್ರಕೋಟೆ ಇದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಈ ಕೋಟೆಯ ಸುಳಿಯಲ್ಲಿ ಅವರು ಸಿಲುಕಿದ್ದಾರೆ. ರೈತರ ಬೆಳೆಗಳಿಗೆ ನೀರು ಬಿಡಿಸುವ ಹೊಣೆಯನ್ನು ಸುಮಲತಾ ಅವರಿಗೆ ಜಿಲ್ಲೆಯ ಜೆಡಿಎಸ್‌ ಮುಖಂಡರು ವಹಿಸುವ ಮೂಲಕ ರಾಜಕೀಯ ಪರೀಕ್ಷೆಗೊಳಪಡಿಸಿದ್ದಾರೆ.

ರೈತರ ಬೆಳೆಗಳಿಗೆ ಕಾವೇರಿ ನಾಲೆಗಳಿಂದ ನೀರು ಬಿಡುಗಡೆ ಮಾಡಬೇಕಾದರೆ ನೀರು ನಿರ್ವಹಣಾ ಮಂಡಳಿಯ ಅನುಮತಿ ಅಗತ್ಯ. ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡುವ ಕಾರಣ ಅವರು ಕೇಂದ್ರದ ಮೇಲೆ ಒತ್ತಡ ತಂದು ನೀರು ಹರಿಸಬಹುದಾದರೂ ಸವಾಲಂತೂ ಇದ್ದೇ ಇದೆ.

ಮಂಡ್ಯ ಜಿಲ್ಲೆಯಲ್ಲಿ ಅಷ್ಟದಿಕ್ಪಾಲಕರಾಗಿ ಜೆಡಿಎಸ್‌ನ ಮುಖಂಡರುಗಳಿದ್ದರೂ ಪಕ್ಷದ ಭದ್ರಕೋಟೆಯನ್ನು ಸುಮಲತಾ ಛಿದ್ರಗೊಳಿಸಿದ್ದಾರೆ. ತಮಗಾಗಿರುವ ಅವಮಾನವನ್ನು ತೀರಿಸಿಕೊಳ್ಳಲು ಜೆಡಿಎಸ್‌ ನಾಯಕರು ಸುಮಲತಾ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಷಡ್ಯಂತ್ರ ರೂಪಿಸುವಲ್ಲಿ ತೊಡಗಿದ್ದಾರೆ. ಇದರ ಮೊದಲ ಅಸ್ತ್ರವೇ ರೈತರಿಗೆ ನೀರು ಬಿಡುವ ವಿಚಾರವಾಗಿದೆ. ಇದೇ ವಿಚಾರವಾಗಿಟ್ಟುಕೊಂಡು ರಾಜಕೀಯ ದಾಳ ಹಾಕಲು ಮುಂದಾಗಿದ್ದಾರೆ. ರೈತರಿಗೆ ನೀರು ಹರಿಸುವ ವಿಚಾರ ಸಂಬಂಧ ಸಮಲತಾ ಅವರಿಗೆ ಎದುರಾಗಿರುವ ಮೊದಲ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗಿದೆ. ಈ ಸವಾಲನ್ನು ಯಾವ ರೀತಿಯಲ್ಲಿ ಎದುರಿಸಲಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಭತ್ತದ ಬೆಳೆಯು ನೀರಿಲ್ಲದೆ ಕೆಲವು ಕಡೆ ಒಣಗುವ ಸ್ಥಿತಿ ಇದೆ. ಬೆಳೆಗಳಿಗೆ ನೀರಿನ ಅಗತ್ಯ ಇದೆ. ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಭತ್ತಕ್ಕೆ ಈಗ ನೀರು ಕೊಡಬೇಕಾಗಿದೆ. ಮಳವಳ್ಳಿ ಮತ್ತು ಮದ್ದೂರು ಕೊನೆ ಭಾಗದ ಬೆಳೆಗಳಿಗೆ ನೀರು ಕೊಡುವುದು ಸುಲಭವಲ್ಲ. ಜೂನ್‌ 15ರವರೆಗೆ ಕೆಆರ್‌ಎಸ್‌ಗೆ ನೀರಿನ ಒಳಹರಿವು ಇರುವುದಿಲ್ಲ. ಒಂದು ವೇಳೆ ಬಿಟ್ಟರೆ 12 ದಿನಗಳ ಕಾಲ ನೀರು ಬಿಡಬೇಕು. ಆದರೆ, ನೀರು ನಿರ್ವಹಣಾ ಮಂಡಳಿಯು ನೀರು ಬಿಡುವ ಲಕ್ಷಣ ಕಾಣುತ್ತಿಲ್ಲ. ನೀರಾವರಿ ಇಲಾಖೆಯ ಮೂಲಗಳು ಸಹ ನೀರು ಬಿಡುವುದಿಲ್ಲ ಎಂದು ಹೇಳುತ್ತಿವೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಬೇಕು. ಡ್ಯಾಂನಲ್ಲಿ 3 ಟಿಎಂಸಿ ನೀರಿದೆ ಎಂದು ಹೇಳಲಾಗಿದೆ.

ನೀರು ನಿರ್ವಹಣಾ ಮಂಡಳಿಯು ಕೇಂದ್ರದ ಅಧೀನದಲ್ಲಿದ್ದು, ಕೇಂದ್ರದಿಂದ ಅನುಮತಿಯ ಅಗತ್ಯ ಇದೆ. ಸುಮಲತಾ ಅವರಿಗೆ ಬಿಜೆಪಿಯ ಬೆಂಬಲ ಇರುವ ಕಾರಣ ಕೇಂದ್ರದ ಮೇಲೆ ಒತ್ತಡ ತಂದು ನೀರು ಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.