ಮಂಡ್ಯ, [ಸೆ.06]: ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನ ಸುರೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಆದ್ರೆ, ಇದೀಗ ಮಂಡ್ಯ ಮಾಜಿ ಜೆಡಿಎಸ್ ಸಂಸದ ಈಗಿನಿಂದಲೇ ನಾಗಮಂಡಲ ಕ್ಷೇತ್ರಕ್ಕೆ ಟವೆಲ್ ಹಾಕಿದ್ದಾರೆ.

ಇಂದು [ಶುಕ್ರವಾರ] ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಮಂಡ್ಯ ಮಾಜಿ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ ,  ನಾಗಮಂಗಲದಲ್ಲಿ ನನಗೆ ನನ್ನದೇ ಆದ ಮತ ಬ್ಯಾಂಕ್ ಇದೆ. ಇಲ್ಲಿಯವರೆವಿಗೂ ಮತ್ತೊಬ್ಬರ ಗೆಲುವಿಗೆ ಶ್ರಮಿಸಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಮತದಾರರ ಅಭಿಪ್ರಾಯದಂತೆ ನೆಡೆಯುವೆ ಎಂದು ಹೇಳಿದರು.

ಈ ಮಾತುಗಳನ್ನು ನೋಡಿದ್ರೆ ಶಿವರಾಮೇಗೌಡ್ರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಂತಿದೆ. ಪ್ರಸ್ತುತ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಇದೇ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದರೂ ಶಿವರಾಮೇಗೌಡ್ರ ಹೇಳಿಕೆ ಮಾತ್ರ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದೆ.

ಶಿವರಾಮೇಗೌಡರ ಮಾತಿನ ರೀತಿ ನೋಡಿದ್ರೆ,  ಒಂದು ವೇಳೆ ಟಿಕೆಟ್ ಸುರೇಶ್ ಗೌಡ ಅವರಿಗೆ ಸಿಕ್ಕರೆ ಜೆಡಿಎಸ್ ತೊರೆದು ಬೇರೆ ಪಕ್ಷದಿಂದ ನಿಲ್ಲುತ್ತೇನೆ ಎನ್ನುವಂತಿದೆ.

ಇನ್ನು ಮೂರು ವರ್ಷ ಬಳಿಕವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಒಂದು ವೇಳೆ ಬದಲಾದ ರಾಜ್ಯ ರಾಜಕಾರಣದಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ.