ಪೊಲೀಸರಿಗೆ ಹೇಳಿ ಆತ್ಮಹತ್ಯೆ ಮಾಡಿಕೊಂಡ..!

First Published 11, Jan 2018, 10:34 AM IST
Man Suicide In Bengaluru
Highlights

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರು, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬುಧವಾರ ಚುಂಚಘಟ್ಟ ರಸ್ತೆಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ. 

ಬೆಂಗಳೂರು(ಜ.11): ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರು, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬುಧವಾರ ಚುಂಚಘಟ್ಟ ರಸ್ತೆಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವೆಂಕಟೇಶ್ (55) ಮೃತ ವ್ಯಕ್ತಿ.

ಮನೆಯಲ್ಲಿ ಪತ್ನಿ ಕೆಲಸಕ್ಕೆ ತೆರಳಿದ್ದಾಗ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತ ಪತ್ನಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಬೆಳಗ್ಗೆ 11ಕ್ಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ಮೃತರು, ‘ನನ್ನ ಹೆಸರು ವೆಂಕಟೇಶ್. ನಾನು ಸಾಯುತ್ತಿದ್ದೇನೆ’ ಎಂದಷ್ಟೇ ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.

ಈ ಕರೆಯಿಂದ ಆತಂಕಗೊಂಡ ಸಿಬ್ಬಂದಿ, ತಕ್ಷಣೇ ಅದೇ ಸಂಖ್ಯೆ ಮತ್ತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಕೆಲ ಹೊತ್ತಿನ ಬಳಿಕ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ವೆಂಕಟೇಶ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನಿಯಂತ್ರಣ ಕೊಠಡಿಗೆ ಕರೆ ಸ್ಥಳೀಯರು ಕರೆ ಮಾಡಿದ್ದಾರೆ. ಆಗ ಸ್ಥಳೀಯರ ಬಳಿ ಮೃತರ ಮೊಬೈಲ್ ಸಂಖ್ಯೆಯನ್ನು ವಿಚಾರಿಸಿದಾಗ, ಬೆಳಗ್ಗೆ ಕರೆ ಮಾಡಿದ್ದ ವ್ಯಕ್ತಿ ಇವರೇ ಎಂಬುವರು ಖಾತ್ರಿಯಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡು ಮನೆಗಳನ್ನು ಹೊಂದಿದ್ದ ವೆಂಕಟೇಶ್, ಬಾಡಿಗೆಯಿಂದ ಬರುತ್ತಿದ್ದ ಆದಾಯದಲ್ಲಿ ಜೀವನ ನಡೆಸುತ್ತಿದ್ದರು. ಅವರ ಪತ್ನಿ ರಾಧಮ್ಮ, ಮನೆಗೆಲಸಕ್ಕೆ ಹೋಗುತ್ತಿದ್ದರು. ಪತ್ನಿ ಬೆಳಗ್ಗೆ 11ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಬಳಿಕ ಅವರು ಪೊಲೀಸರಿಗೆ ವಿಷಯ ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ  ಪರಿಚಯಸ್ಥರಿಂದ ಪತಿ 6 ಲಕ್ಷ ಸಾಲ ಮಾಡಿದ್ದರು. ಆದರೆ ಸಕಾಲಕ್ಕೆ ಹಣ ಮರಳಿಸಲು ಸಾಧ್ಯವಾಗಿರಲಿಲ್ಲ.  ಇತ್ತೀಚಿಗೆ ಹಣ ಕೊಟ್ಟವರು ನಿತ್ಯ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸರಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ರಾಧಮ್ಮ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

loader