ಲಂಡನ್[ಸೆ.15]: 71 ವರ್ಷದ ರಿಚರ್ಡ್ ಕಿಡ್ವೇಲ್ ಬ್ರಿಟನ್ ನಿವಾಸಿ. ನಿವೃತ್ತ ಇಂಜಿನಿಯರ್ ಆಗಿರುವ ರಿಚರ್ಡ್ ಬಹುದೊಡ್ಡ ಕಾನೂನು ಸಮರ ಮಾಡಿದ್ದಾರೆ. ಟ್ರಾಫಿಕ್ ಪೊಲೀಸ್ ವೇಗವಾಗಿ ಕಾರು ಚಲಾಯಿಸಿದ ರಿಚರ್ಡ್ ಗೆ 100 ಪೌಂಡ್ ಅಂದರೆ ಸುಮಾರು 8800 ರೂಪಯಿ ದಂಡ ವಿಧಿಸಿದ್ದು, ಇದನ್ನು ವಿರೋಧಿಸಿದ್ದ ರಿಚರ್ಡ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕಾನೂನು ಪ್ರಕ್ರಿಯೆಗಾಗಿ ಸುಮಾರು 26.6 ಲಕ್ಷ ಮೊತ್ತ ವ್ಯಯಿಸಿದರೂ ಕೇಸ್ ನಲ್ಲಿ ಸೋಲನುಭವಿಸಿದ್ದಾರೆ.

2016 ನವೆಂಬರ್ ನಲ್ಲಿ ನಡೆದ ಘಟನೆ

2016ರ ನವೆಂಬರ್ ನಲ್ಲಿ ರಿಚರ್ಡ್ ರೋಡ್ ಟ್ರಿಪ್ ನಿಮಿತ್ತ ವಾರ್ಡೆಸ್ಟರ್ ಗೆ ತೆರಳುತ್ತಿದ್ದರು. ಈ ವೇಳೆ ಅವರು 30mph ವೇಗದಲ್ಲಿ ವಾಹನ ಚಲಾಯಿಸುವ ರಸ್ತೆಯಲ್ಲಿ 35mph ವೇಗದಲ್ಲಿ ತೆರಳುತ್ತಿರುವುದು ಸ್ಟೀಡ್ ಕ್ಯಾಮರಾ ಮೂಲಕ ಟ್ರಾಫಿಕ್ ಪೊಲೀಸ್ ಗಮನಕ್ಕೆ ಬಂದಿದೆ. ಆ ದಿನದ ಘಟನೆಯನ್ನು ಮೆಲುಕು ಹಾಕಿರುವ ರಿಚರ್ಡ್ 'ನನಗೆ ಸರಿಯಾಗಿ ನೆನಪಿದೆ ಅಂದು ನಾನು ಸಮಯವನ್ನು ವ್ಯರ್ಥವಾಗಿ ಕಳೆದಿದ್ದೆ. ಹೀಗಿದ್ದರೂ ಒಂದು ದಿನ ನನಗೆ ದಂಡ ಕಟ್ಟುವಂತೆ ನೋಟಿಸ್ ಬಂದಿತ್ತು. ನನಗೆ ಚೆನ್ನಾಗಿ ನೆನಪಿದೆ ಅಂದು ನನ್ನ ಕಾರಿನ ಸ್ಪೀಡ್ ಅಷ್ಟು ಇರಲಿಲ್ಲ. ಹೀಗಾಗಿ ನಾನು ಕಾನೂನು ಹೋರಾಟ ನಡೆಸಲು ಮುಂದಾದೆ' ಎಂದಿದ್ದಾರೆ.

ಮೂರು ವರ್ಷಗಳ ಕಾನೂನು ಹೋರಾಟ

ಪೊಲೀಸ್ ಸ್ಪೀಡ್ ಕ್ಯಾಮರಾದಲ್ಲಿ ಏನೋ ಹುನ್ನಾರ ನಡೆಸುತ್ತಿದ್ದಾರೆ ಎಂಬ ಅನುಮಾನದ ಮೇರೆಗೆ ರಿಚರ್ಡ್ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ಹೋರಾಟ ಮೂರು ವರ್ಷಗಳವರೆಗೆ ಮುಂದುವರೆಯುತ್ತದೆ, ಹಾಗೂ ಇಷ್ಟು ದುಬಾರಿಯಾಗಲಿದೆ ಎಂದು ಅವರಿಗೆ ತಿಳಿದಿಲಿಲ್ಲ. 

21 ಸಾವಿರ ಪೌಂಡ್ ಮೊತ್ತ ವಕೀಲರ ಶುಲ್ಕ!

ಕಳೆದ ಮೂರು ವರ್ಷಗಳಲ್ಲಿ 100 ಪೌಂಡ್ ನ ಈ ದಂಡ ಪ್ರಕರಣದ ಕಾನೂನು ಹೋರಾಟಕ್ಕೆ ರಿಚರ್ಡ್ 30 ಸಾವಿರ ಪೌಂಡ್ ಖರ್ಚು ಮಾಡಿದ್ದಾರೆ. ಇದರಲ್ಲಿ 21 ಸಾವಿರ ಪೌಂಡ್ಸ್ ವಕೀಲರ ಶುಲ್ಕವಾದರೆ, 7000 ಪೌಂಡ್ಸ್ ಕೋರ್ಟ್ ಹಾಗೂ ಇನ್ನಿತರ ಕೆಲಸಕ್ಕಾಗಿ ವ್ಯಯಿಸಿದ್ದಾರೆ. ಕೋರ್ಟ್ ಕೆಲಸಕ್ಕೆ ಇಷ್ಟು ದೊಡ್ಡ ಮೊತ್ತ ವ್ಯಯಿಸಬೇಕಾಗುತ್ತದೆ ಎಂದು ರಿಚರ್ಡ್ ಕಲ್ಪಿಸಿಕೊಂಡಿರಲಿಲ್ಲವಂತೆ.

ನಾನು ಈ ವ್ಯವಸ್ಥೆಯಿಂದ ಬೇಸತ್ತಿದ್ದೇನೆ...

'ಪ್ರಕರಣ ಸಂಬಂಧ ಇಷ್ಟು ದೊಡ್ಡ ಮೊತ್ತ ವ್ಯಯಿಸಿರುವುದಕ್ಕೆ ಪಶ್ಚಾತಾಪವಿದೆ. ಆದರೆ ನಾನು ನ್ಯಾಯಕ್ಕಾಗಿ ಹೋರಾಡಿದ್ದೆ. ಕಾನೂನು ಹೋರಾಟಕ್ಕೆ ವ್ಯಯಿಸಿದ್ದ ಹಣವನ್ನು ನನ್ನ ಮಕ್ಕಳಿಗೆ ನೀಡಬೇಕು ಎಂದು ನಿರ್ಧರಿಸಿದ್ದೆ' ಎಂದಿದ್ದಾರೆ.

ಇಷ್ಟು ದೊಡ್ಡ ಮೊತ್ತ ವ್ಯಯಿಸಿದರೂ ರಿಚರ್ಡ್ ಕಾನೂನು ಸಮರದಲ್ಲಿ ಸೋಲನುಭವಿಸಿದ್ದಾರೆ. ಹೀಗಿದ್ದರೂ ಅವರು ಉನ್ನತ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸುತ್ತಾರಾ? ಎಂಬುವುದು ಅಸ್ಪಷ್ಟ. ಮುಂದೇನಾಗುತ್ತೆ ಕಾದು ನೋಡಬೇಕಷ್ಟೇ