ಕಾರ್ಯಕ್ರಮವೊಂದರಲ್ಲಿ ತುಂಡುಡುಗೆಯುಟ್ಟ ಯುವತಿಯರ ಡ್ಯಾನ್ಸ್ ಸಂದರ್ಭ ಉಪಸ್ಥಿತರಿದ್ದು ಟೀಕೆಗೆ ಗುರಿಯಾಗಿದ್ದ ನೈಸ್ ಸಂಸ್ಥೆಯ ಮುಖ್ಯಸ್ಥ, ಶಾಸಕ ಅಶೋಕ ಖೇಣಿ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಬೀದರ್: ಕಾರ್ಯಕ್ರಮವೊಂದರಲ್ಲಿ ತುಂಡುಡುಗೆಯುಟ್ಟ ಯುವತಿಯರ ಡ್ಯಾನ್ಸ್ ಸಂದರ್ಭ ಉಪಸ್ಥಿತರಿದ್ದು ಟೀಕೆಗೆ ಗುರಿಯಾಗಿದ್ದ ನೈಸ್ ಸಂಸ್ಥೆಯ ಮುಖ್ಯಸ್ಥ, ಶಾಸಕ ಅಶೋಕ ಖೇಣಿ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ದಲಿತರ ಜನ ಜಾಗೃತಿ ಸಮಾವೇಶದಲ್ಲಿ ಕಾರ್ಯ ಕರ್ತನೊಬ್ಬ ಖೇಣಿ ಮೇಲೆ ದುಡ್ಡು ಹಾರಿಸಿದ್ದು ಅದನ್ನು ನೋಡಿಯೂ ನೋಡ ದಂತೆ ಅವರು ಮುಂದೆ ಸಾಗಿದ್ದು ವಿವಾದ ಸೃಷ್ಟಿಸಿದೆ.
ಖೇಣಿ ಅವರ ಕರ್ನಾಟಕ ಮಕ್ಕಳ ಪಕ್ಷ ಆಯೋಜಿಸಿದ್ದ ದಲಿತರ ಜನ ಜಾಗೃತಿ ಸಮಾವೇಶ ಹಾಗೂ ಡಾ. ಅಂಬೇಡ್ಕರ್ ಸಮುದಾಯ ಭವನದ ಗುದ್ದಲಿ ಪೂಜೆಯಲ್ಲಿ ಪಾಲ್ಗೊಳ್ಳಲು ತೆರಳುವಾಗ ಈ ಘಟನೆ ನಡೆದಿದೆ. ಹತ್ತಾರು ಕಾರು, ಜೀಪುಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಶಾಸಕ ಖೇಣಿ ಅವರ ದಂಡು ಮನ್ನಳ್ಳಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ನೂರಾರು ಕಾರ್ಯಕರ್ತರು ಕಾರಿನ ಬಳಿ ತೆರಳಿ ಅವರನ್ನು ಸುತ್ತುವರಿದು ಮೆರವಣಿಗೆಯಲ್ಲಿ ಕರೆದೊಯ್ಯ ಲಾರಂಭಿಸಿದರು.
ಆ ಸಂದರ್ಭದಲ್ಲಿ ಗುಂಪಿಲ್ಲಿದ್ದವನೊಬ್ಬ 10 ರು.ನೋಟಿನ ಕಂತೆ ಹೊರ ತೆಗೆದು ಖೇಣಿ ಮೇಲೆ ಹಾರಿಸ ಲಾರಂಭಿ ಸಿದಾಗ ಕೆಳಗೆ ಬಿದ್ದ ನೋಟುಗಳನ್ನು ಪಡೆಯಲು ಅಲ್ಲಿದ್ದ ವರೆಲ್ಲ ಹೆಣಗಾಡಿದ ಪ್ರಸಂಗ ನಡೆಯಿತು. ಇದನ್ನು ಗಮನಿಸಿಯೂ ಗಮನಿಸದಂತೆ ಖೇಣಿ ಮುಂದೆ ಸಾಗಿದ್ದು ಹಲವು ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ದಲಿತರ ಹೆಸರಿನಲ್ಲಿ ಸಮಾವೇಶ ನಡೆಸುವ ಖೇಣಿ ಮೇಲೆ ಈ ರೀತಿ ಹಣ ಹಾರಿಸುವ ಅಗತ್ಯ ಇದೆಯಾ ಎಂಬ ಮಾತುಗಳು ಕೇಳಿ ಬಂದಿವೆ.
