ಮೀರಠ್(ಆ.20): ಗಂಡ ಚೆನ್ನಾಗಿ ತಿಂದುಂಡು ದಷ್ಟಪುಷ್ಟವಾಗಿರಲಿ ಎಂಬುದು ಎಲ್ಲಾ ಭಾರತೀಯ ನಾರಿಯರ ಬಯಕೆ. ಪತಿರಾಯ ಚೆನ್ನಾಗಿ ತಿಂದಷ್ಟೂ ಸಂಸಾರ ನೌಕೆ ಚೆನ್ನಾಗಿ ತೇಲುತ್ತದೆ ಎಂಬುದು ಪತ್ನಿ ಚೆನ್ನಾಗಿ ಬಲ್ಲಳು.

ಆದರೆ ಇಲ್ಲೋರ್ವ ಪತ್ನಿ ಮಂತ್ರವಾದಿ ಮಾತು ಕೇಳಿ ಪತಿಗೆ ತಿನ್ನಲು ದಿನವೂ ಕೇವಲ ಲಡ್ಡೂ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದಾಳೆ.  

ಪತ್ನಿ ಕೇವಲ ತಿನ್ನಲು ಲಡ್ಡೂ ಕೊಡುತ್ತಾಳೆಂದು ಆರೋಪಿಸಿ, ಆಕೆಯಿಂದ ವಿಚ್ಚೇದನ ಕೋರಿ ಪತಿರಾಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.

ಉತ್ತರಪ್ರದೇಶದ ಮೀರಠ್’ನಲ್ಲಿ ಈ ಘಟನೆ ನಡೆದಿದ್ದು, ಪರಿಯ ಆರೋಗ್ಯ ಸುಧಾರಣೆಗಾಗಿ ಲಡ್ಡೂ ಬಿಟ್ಟು ಬೇರೆ ಏನನ್ನೂ ಕೊಡಕೂಡದು ಎಂಬ ಮಂತ್ರವಾದಿಯ ಮಾತು ಇದೀಗ ವಿಚ್ಚೇದನಕ್ಕೆ ಕಾರಣವಾಗಿದೆ.

ಪತಿಯ ದೂರು ಸ್ವೀಕರಿಸಿ ಕೌನ್ಸೆಲಿಂಗ್ ನಡೆಸಲು ಕೌಟುಂಬಿಕ ನ್ಯಾಯಾಲಯ ಪ್ರಯತ್ನ ನಡೆಸಿತಾದರೂ, ಮೂಢನಂಬಿಕೆ ಮೇಲೆ ವಿಶ್ವಾಸವಿರಿಸಿರುವ ಪತ್ನಿ ನ್ಯಾಯಾಲಯದ ಮಾತು ಕೇಳುತ್ತಿಲ್ಲ ಎನ್ನಲಾಗಿದೆ.