ಮುಂಬಯಿ: 'ಡಾರ್ಲಿಂಗ್' ಎಂದು ಹೇಳಿ, ಮಧ್ಯದ ಬೆರಳು ತೋರಿದ ವರ್ತನೆ ಬಗ್ಗೆ ಮಹಿಳೆಯೊಬ್ಬರು ಕಂಪನಿ ಮ್ಯಾನೇಜ್‌ಮೆಂಟ್ ಹಾಗೂ ಠಾಣೆಗೆ ದೂರು ನೀಡಿದ ಪರಿಣಾಮ ಸಹೋದ್ಯೋಗಿ ಇದೀಗ ಕಂಬಿ ಎಣಿಸಬೇಕಾಗಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ನಡೆದ ಈ ಘಟನೆ ಬಗ್ಗೆ ಮಹಿಳೆಯೊಬ್ಬರು ಕಂಪನಿಗೆ ದೂರು ನೀಡಿದ್ದರು. ನಂತರ ಸಖಿ ನಕಾ ಠಾಣೆಯಲ್ಲಿಯೂ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಹೋದ್ಯೋಗಿಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕಂಪನಿಗೆ ಟ್ರೈನಿಯಾಗಿ, ಈ ಸಂತ್ರಸ್ತೆ ಸೇರಿಕೊಂಡಿದ್ದರು. ಕಚೇರಿಯಲ್ಲಿ ಒಮ್ಮೆ ಈ ವ್ಯಕ್ತಿ 'ಡಾರ್ಲಿಂಗ್ ದಯವಿಟ್ಟು ಈ ವಸ್ತುವನ್ನು ಕೊಡು...' ಎಂದು ಟ್ರೈನಿಂಗ್‌ ನಡೆಯುತ್ತಿದ್ದಾಗ ಕೇಳಿಕೊಂಡಿದ್ದ. ಇದರಿಂದ ಅವಮಾನಿತರಾಗಿದ್ದ ಮಹಿಳಾ ಉದ್ಯೋಗಿ, ಯಾವುದೇ ರೀತಿಯ ಪ್ರತಿಕ್ರಿಯೆ ತೋರದೇ, ಅಲ್ಲಿಂದ ಹೊರ ಹೋಗಿದ್ದರು. ಆದರೆ, ಮಾರನೇ ದಿನವೂ ಆತ ಇಂಥದ್ದೇ ದುರ್ವರ್ತನೆ ತೋರಿದ್ದು, ಮ್ಯಾನೇಜ್‌ಮೆಂಟ್‌ಗೆ ದೂರು ನೀಡಿದ್ದಳು. ವ್ಯಕ್ತಿಗೆ ಕ್ಷಮೆ ಕೋರುವಂತೆ ಮ್ಯಾನೇಜ್‌ಮೆಂಟ್ ಸೂಚಿಸಿತ್ತು.

ಮಧ್ಯ ಬೆರಳನ್ನೂ ಆತ ತೋರಿದ್ದು, ಠಾಣೆಗೂ ದೂರು ನೀಡಲಾಗಿತ್ತು. ಪದ ಅಥವಾ ನಡತೆಯ ಮೂಲಕ ಮಹಿಳೆಯ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡ ಆರೋಪದ ಮೇಲೆ ಐಪಿಸಿ ಸೆಕ್ಷನ್ 509 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು,  ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.