* ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ 2ನೇ ಪತಿ* ಎಷ್ಟನೇ ಮಗು ಎಂದು ಪ್ರಶ್ನಿಸಿದ ವೈದ್ಯರಿಗೆ ಉತ್ತರಿಸಲು ತಡವರಿಸಿದ ಪತ್ನಿ* 2ನೇ ಪತಿಯಿಂದ ಪತ್ನಿಯ ತೀವ್ರ ವಿಚಾರಣೆ, * ಸತ್ಯ ತಿಳಿದು ಕುಪಿತನಾಗಿ ಕುತ್ತಿಗೆ ಬಿಗಿದು ಹತ್ಯೆ* ಮನೆ ಬಳಿಯ ಪೊದೆಯಲ್ಲಿ ಶವ ಎಸೆದು ಅಸ್ಸಾಂಗೆ ಹೋಗಿದ್ದ ಪತಿ* ಅಸ್ಸಾಂಗೆ ತೆರಳಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು
ಬೆಂಗಳೂರು(ಮೇ 1): ಮೊದಲ ವಿವಾಹ ಮುಚ್ಚಿಟ್ಟು, ಎರಡನೇ ಮದುವೆಯಾಗಿದ್ದ ಮಹಿಳೆಯನ್ನು ಎರಡನೇ ಪತಿ ಕೊಲೆಗೈದ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ಸರಹದ್ದಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಜುನಾಲ್ ಕ್ವಾಲ್ (22) ಕೊಲೆಯಾದ ಮಹಿಳೆ. ಕೊಲೆ ಮಾಡಿ ಮೃತ ದೇಹವನ್ನು ಪೊದೆಯಲ್ಲಿ ಬಿಸಾಕಿ ಹೋಗಿದ್ದ ಪತಿ ಅಸ್ಸಾಂ ಮೂಲದ ಅಜಯ್'ದಾಸ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆ ಮತ್ತು ಅಜಯ್‌ದಾಸ್ ಮೂಲತಃ ಅಸ್ಸಾಂನವರಾಗಿದ್ದು, ಇಬ್ಬರು ಎಲೆಕ್ಟ್ರಾನಿಕ್ ಸಿಟಿ ಸಾಯಿ ಗಾರ್ಮೆಂಟ್ಸ್'ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಸ್ನೇಹವಾಗಿದ್ದು, ಕ್ರಮೇಣ ಪ್ರೀತಿಗೆ ತಿರುಗಿತ್ತು. ಕಳೆದ 6 ತಿಂಗಳ ಹಿಂದೆ ಅಜಯ್ ಮತ್ತು ಜುನಾಲ್ ಕ್ವಾಲ್ ದೇವಸ್ಥಾನವೊಂದರಲ್ಲಿ ವಿವಾಹವಾಗಿ ಬಸವಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಇತ್ತೀಚೆಗೆ ಪತಿ ಅಜಯ್'ದಾಸ್ ಪತ್ನಿಯನ್ನು ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡಿದ್ದ. ಜುನಾಲ್'ನನ್ನು ಪರೀಕ್ಷಿಸಿದ ವೈದ್ಯರು ಎಷ್ಟನೇ ಮಗು ಎಂದು ಪ್ರಶ್ನಿಸಿದ್ದಾರೆ. ವೈದ್ಯರ ಪ್ರಶ್ನೆಗೆ ಉತ್ತರಿಸಲು ಮಹಿಳೆ ತಡಬಡಾಯಿಸಿದ್ದಾಳೆ. ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಅಜಯ್'ದಾಸ್, ಜುನಾಲ್'ಳನ್ನು ಇದೇ ವಿಷಯವಾಗಿ ಪ್ರಶ್ನಿಸಿದ್ದ. ಆಗ ತನಗೆ ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳಿರುವ ವಿಷಯವನ್ನು ಅಜಯ್‌ದಾಸ್‌ಗೆ ತಿಳಿಸಿದ್ದಾಳೆ. ಈ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿದೆ. ವಂಚಿಸಿ ಮದುವೆಯಾಗಿದ್ದಾಗಿ ಆಕ್ರೋಶಗೊಂಡ ಅಜಯ್, ಪತ್ನಿ ಮೇಲೆ ಹಲ್ಲೆ ನಡೆಸಿ, ಹಗ್ಗದಿಂದ ಕತ್ತು ಹಿಸುಕಿ ಕೊಲೆಗೈದಿದ್ದ.
ಪೊದೆಗೆ ಎಸೆದು ಅಸ್ಸಾಂಗೆ ಪರಾರಿ: ಕೊಲೆ ನಂತರ ಆರೋಪಿ ಮೃತ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಕಟ್ಟಿಮನೆಗೆ 100 ಮೀ. ದೂರದಲ್ಲಿರುವ ಪೊದೆಯೊಂದಕ್ಕೆ ಎಸೆದು ಅಸ್ಸಾಂಗೆ ಪರಾರಿಯಾಗಿದ್ದ. ಕಳೆದ ನಾಲ್ಕೈದು ದಿನಗಳ ಹಿಂದೆ ಪೊದೆ ಬಳಿ ಕೊಳೆತ ದುರ್ವಾಸನೆ ಬರುತ್ತಿತ್ತು. ಇದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ನಡೆಸಿದಾಗ ಒಂದು ವಾರದಿಂದ ಅಜಯ್ ಮನೆ ಬೀಗ ಹಾಕಿರುವುದು ತಿಳಿದು ಬಂದಿತು ಅಸ್ಸಾಂಗೆ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯದ ವಿಚಾರಕ್ಕೆ ಸ್ನೇಹಿತನನ್ನೇ ಗುದ್ದಿ ಹತ್ಯೆ
ಬೆಂಗಳೂರು: ಮದ್ಯ ಸೇವನೆ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಎಲಚೇನಹಳ್ಳಿ ನಿವಾಸಿ ರಾಘವೇಂದ್ರ (45) ಮೃತರು. ಕೊಲೆ ಆರೋಪಿ ಗಿರೀಶ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ರಾಘವೇಂದ್ರ ಮತ್ತು ಗಿರೀಶ್ ಇಬ್ಬರು ಸ್ನೇಹಿತರಾಗಿದ್ದು, ಪುಟ್ಟೇನಹಳ್ಳಿ ನಿವಾಸಿಗಳು. ಇಬ್ಬರು ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ರಾಘವೇಂದ್ರ, ಗಿರೀಶ್ ಒಟ್ಟಿಗೆ ಹೋಗಿ ಮದ್ಯ ಸೇವಿಸುತ್ತಿದ್ದರು. ಮದ್ಯ ಸೇವನೆಗೆ ರಾಘವೇಂದ್ರ ಅವರೇ ಹಣ ನೀಡುತ್ತಿದ್ದರು. ಶನಿವಾರ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಮದ್ಯ ಸೇವಿಸಿದ್ದರು. ಮನೆಗೆ ಹೋಗುವಾಗ ಮಾರ್ಗ ಮಧ್ಯೆ ರಾಘವೇಂದ್ರ ನಿತ್ಯ ನಾನೇ ಮದ್ಯ ಕೊಡಿಸುತ್ತಿದ್ದೇನೆ. ನೀನು ಕೊಡಿಸುತ್ತಿಲ್ಲ ಎಂದು ಸ್ನೇಹಿತ ಗಿರೀಶ್‌ನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಎಲಚೇನಗಹಳ್ಳಿ ಕೈಗಾರಿಕಾ ಪ್ರದೇಶದ ಲಾರಿ ನಿಲ್ದಾಣದಲ್ಲಿ ಗಿರೀಶ್, ರಾಘವೇಂದ್ರ ಅವರ ಮುಖಕ್ಕೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ.
ಕನ್ನಡಪ್ರಭ ವಾರ್ತೆ
epaper.kannadaprabha.in
