ಬೆಂಗಳೂರು :  ‘ಲೂಡೊ’ ಮೊಬೈಲ್‌ ಗೇಮ್‌ ಆಡುವ ವಿಚಾರಕ್ಕೆ ಜಗಳ ನಡೆದು ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್‌ನ ಇಲಿಯಾಸ್‌ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಬೇಂದ್ರೆನಗರ ನಿವಾಸಿ ಶೇಕ್‌ ಮಿಲನ್‌ (32) ಮೃತ ವ್ಯಕ್ತಿ. ಈ ಸಂಬಂಧ ಆರೋಪಿಗಳಾದ ಶೋಹಿಲ್‌, ಅಲಿ, ಅಸು, ನಯಾಸ್‌ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಶೇಕ್‌ ಮಿಲನ್‌ ಮೂಲತಃ ಪಶ್ಚಿಮಬಂಗಾಳ ರಾಜ್ಯದವನಾಗಿದ್ದು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶೇಕ್‌ ಫ್ಯಾಬ್ರಿಕೇಷನ್‌ ಕೆಲಸ ಮಾಡುತ್ತಿದ್ದರು. ಶೇಕ್‌ ಹಾಗೂ ಆತನ ಸ್ನೇಹಿತರು ಸಮಯ ಸಿಕ್ಕಾಗಲೆಲ್ಲಾ ಹಣ ಕಟ್ಟಿಮೊಬೈಲ್‌ನಲ್ಲಿ ‘ಲೂಡೊ ಗೇಮ್‌’ ಆಡುತ್ತಿದ್ದರು. ಅದರಂತೆ ಶುಕ್ರವಾರ ರಾತ್ರಿ 10.15ರ ಸುಮಾರಿಗೆ ಶೇಕ್‌ ಮಿಲನ್‌, ಆರೋಪಿ ಸ್ನೇಹಿತರಾದ ಶೋಹಿಲ್‌, ಅಲಿ, ಅಸು ಹಾಗೂ ನಯಾಸ್‌ ಸೇರಿದಂತೆ ಆರು ಮಂದಿ ಇಲಿಯಾಸ್‌ ನಗರದಲ್ಲಿ ಸೇರಿದ್ದರು.

ಈ ವೇಳೆ ಎಲ್ಲರೂ .200 ಕಟ್ಟಿಲೂಡೊ ಗೇಮ್‌ ಆಡುತ್ತಿದ್ದರು. ಆಟದ ಮಧ್ಯೆ ಶೇಕ್‌ ಮಿಲನ್‌ ಒತ್ತಬೇಕಿದ್ದ ರೆಡ್‌ಬಟನ್‌ನನ್ನು ಶೋಹಿಲ್‌ ಒತ್ತಿದ್ದ. ನಾನು ಒತ್ತ ಬೇಕಿದ್ದ ಬಟನ್‌ನನ್ನು ನೀನು ಏಕೆ ಒತ್ತಿದೆ ಎದು ಶೇಕ್‌ ಮಿಲನ್‌ ಆರೋಪಿ ಶೋಯಿಲ್‌ಗೆ ಏಕಾಏಕಿ ಹೊಡೆದಿದ್ದಾನೆ.

ಇದರಿಂದಾಗಿ ಇಬ್ಬರೂ ಕೈ-ಕೈ ಮಿಲಾಯಿಸಿದ್ದು, ಶೋಹಿಲ್‌ ತನ್ನ ಬಳಿ ಇದ್ದ ಚಾಕುವಿನಿಂದ ಶೇಕ್‌ನ ಕುತ್ತಿಗೆ, ಕಿವಿ ಹಾಗೂ ತಲೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ತನ್ನ ಬಳಿ ಚಾಕು ಇಟ್ಟುಕೊಂಡು ಆಟ ಆಡಲು ಬಂದಿದ್ದ. ಜಗಳ ನಡೆದ ವೇಳೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ವಶಕ್ಕೆ ಪಡೆದಿರುವರ ಪೈಕಿ ಕೆಲವರ ಮೇಲೆ ಕಳ್ಳತನ ಪ್ರಕರಣಗಳಿವೆ. ವಿಚಾರಣೆ ಬಳಿಕ ಇನ್ನಷ್ಟುಮಾಹಿತಿ ಹೊರ ಬರಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.