ಹಾಸನ :  ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಎತ್ತುಗಳು ಅಡ್ಡಾದಿಡ್ಡಿ ಓಡಿದ ಪರಿಣಾಮ ದಿಣ್ಣೆ ಮೇಲೆ ಬಂಡಿ ನೆಗೆದು ಪಲ್ಟಿಯಾದ ಘಟನೆ ಅರಕಲಗೂಡು ತಾಲೂಕಲ್ಲಿ ಭಾನುವಾರ ನಡೆದಿದ್ದು, ಬಂಡಿ ಓಡಿಸುತ್ತಿದ್ದ ರೈತ ಪವಾಡಸದೃಶ್ಯ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ಪರ್ಧೆ ವೇಳೆ ಜನರ ಕೂಗಿಗೆ ಬೆಚ್ಚಿ ಬಿದ್ದು ಎತ್ತುಗಳು ಅಡ್ಡಾದಿಡ್ಡಿಯಾಗಿ ಓಡಿದ್ದರಿಂದ ಈ ಘಟನೆ ಸಂಭವಿಸಿದೆ.

ಆಗಿದ್ದೇನು?:

ಎತ್ತಿನಗಾಡಿ ಸ್ಪರ್ಧೆಗೆಂದೇ ಗದ್ದೆಯನ್ನು ಸಜ್ಜುಗೊಳಿಸಲಾಗಿತ್ತು, ಸಮತಟ್ಟು ಮಾಡಲಾಗಿತ್ತು. ರೇಸ್‌ ಆರಂಭವಾದಾಗ ಉಳಿದೆಲ್ಲ ಎತ್ತಿನಗಾಡಿಗಳು ನಿಗದಿತ ಮಾರ್ಗದಲ್ಲೇ ಸಾಗಿದರೆ ಮಂಜಪ್ಪ ಅವರ ಎತ್ತುಗಳು ಮಾತ್ರ ಸುತ್ತಲೂ ನೆರೆದಿದ್ದ ಜನರ ಕೂಗಾಟ, ಚೀರಾಟಕ್ಕೆ ದಾರಿ ತಪ್ಪಿ ಅಡ್ಡಾದಿಡ್ಡಿ ಓಡಿವೆ.

ಎತ್ತುಗಳು ವೇಗವಾಗಿ ಓಡುತ್ತಿದ್ದಾಗ ಎದುರಾದ ದಿಣ್ಣೆ ಮೇಲೆ ಬಂಡಿ ನೆಗೆದು ಬಿದ್ದು, ಅದರೊಂದಿಗೆ ಬಂಡಿ ಓಡಿಸುತ್ತಿದ್ದ ಮಂಜಪ್ಪ ಕೂಡ ಎಸೆಯಲ್ಪಟ್ಟಿದ್ದಾರೆ. ಸಿನಿಮೀಯ ಶೈಲಿಯಲ್ಲಿ ನಡೆದ ಈ ಘಟನೆಗೆ ಸಾಕ್ಷಿಯಾದ ಸಾರ್ವಜನಿಕರು ಒಂದರೆಕ್ಷಣ ದಿಗಿಲುಗೊಂಡರೂ ಯಾವುದೇ ಹಾನಿಯಾಗದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ರೈತನಿಗೆ ಮಾತ್ರವಲ್ಲದೆ ಎತ್ತುಗಳಿಗೂ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿದೆ.

ಈ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.