ನವದೆಹಲಿ[ಫೆ.03]: ವ್ಯಕ್ತಿಯೊಬ್ಬ ತನ್ನ ಮನೆಯ ಆಸು ಪಾಸಿನ 8 ವರ್ಷದ ಹೆಣ್ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಮನೆಗೊಯ್ಯುತ್ತಿದ್ದ. ಹಾಗಂತ ಮನೆಯಲ್ಲಿ ಅವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿರಲಿಲ್ಲ ಬದಲಾಗಿ ಅವರನ್ನು ಚೆನ್ನಾಗಿ ಆರೈಕೆ ಮಾಡಿ, ಅವರಿಗಿಷ್ಟವಾಗುವ ಊಟ, ತಿಂಡಿ, ಬಟ್ಟೆ ನೀಡಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಇದಾದ ಕೆಲ ದಿನಗಳ ಬಳಿಕ ಅವರನ್ನು ತಮ್ಮ ಮನೆಗೆ ಹೋಗಲು ಬಿಡುತ್ತಿದ್ದ. ಅದರೆ ಈ ವ್ಯಕ್ತಿ ಈ ರೀತಿ ಯಾಕೆ ವರ್ತಿಸುತ್ತಿದ್ದ ಎಂದು ಪ್ರಶ್ನಿಸಿದಾಗ ಈತನ ನೋವಿನ ಕಥೆ ತೆರೆದುಕೊಳ್ಳುತ್ತದೆ.

ವೃತ್ತಿಯಲ್ಲಿ ಚಾಲಕನಗಿರುವ 40 ವರ್ಷದ ಕೃಷ್ಣ ದತ್ತ ತಿವಾರಿ ದೆಹಲಿಯ ರಾಜೌರಿ ಗಾರ್ಡನ್ ನಿವಾಸಿ. ಎರಡು ತಿಂಗಳ ಹಿಂದೆ ಹರೀನಗರ್ ಎಂಬ ಪ್ರದೇಶದಿಂದ ಈತನ 8 ವರ್ಷದ ಮಗಳನ್ನು ಅಪಹರಿಸಲಾಗಿತ್ತು. ಮೂವರು ಮಕ್ಕಳ ತಂದೆಗೆ ಹಿರಿಯ ಇಬ್ಬರು ಗಂಡು ಮಕ್ಕಳಿಗಿಂತ ಕಿರಿಯ ಹೆಣ್ಮಗಳೆಂದರೆ ಬಹಳ ಪ್ರೀತಿ. ಆದರೆ ಮಗಳು ಕಿಡ್ನ್ಯಾಪ್ ಆದ ಬಳಿಕ ದುಃಖ, ನೋವು ತಡೆಯಲಾರದ ತಂದೆ ತಾನಿರುವ ಪ್ರದೇಶದ ಆಸುಪಾಸಿನಲ್ಲಿರುವ 8 ವರ್ಷದ ಹೆಣ್ಮಕ್ಕಳನ್ನು ಅಪಹರಿಸಿ ಮನೆಗೆ ಕರೆದೊಯ್ದು ಅವರ ಸೇವೆ ಮಾಡಿ, ಅವರಲ್ಲೇ ತನ್ನ ಮಗಳನ್ನು ಕಾಣುತ್ತಿದ್ದ.

ಇತ್ತೀಚೆಗಷ್ಟೇ ದೆಹಲಿಯ ಕೀರ್ತಿ ನಗರದ ಜವಾಹರ್ ಕ್ಯಾಂಪ್ ನ 8 ವರ್ಷದ ಹೆಣ್ಮಗಳನ್ನು ತಿವಾರಿ ಕಿಡ್ನ್ಯಾಪ್ ಮಾಡಿದ್ದರು. ಆದರೆ ಮರುದಿನ ಬೆಳಿಗ್ಗೆ ಬಾಲಕಿ ಸುರಕ್ಷಿತವಾಗಿ ತನ್ನ ಮನೆಗೆ ಮರಳಿದ್ದಳು. ತಾನು ಶೌಚಾಲಯಕ್ಕೆ ಹೋದಾಗ ವ್ಯಕ್ತಿಯೊಬ್ಬ ತನಗೆ ಆಸೆ ತೋರಿಸಿ, ಬೈಕ್ ನಲ್ಲಿ ಕುಳ್ಳಿರಿಸಿ ತನ್ನ ಮನೆಗೆ ಕರೆದೊಯ್ದಿದ್ದರು. ಅಲ್ಲಿ ತನಗೇನೂ ಹಾನಿ ಮಾಡದೆ, ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು ಎಂದು ಆಪಹರಣಕ್ಕೊಳಗಾಗಿ ಮನೆಗೆ ಮರಳಿದ ಬಾಲಕಿ ತಿಳಿಸಿದ್ದಾಳೆ. 

ಇನ್ನು ಮನೆಗೆ ಮಕ್ಕಳನ್ನು ಕರೆತಂದು ಎರಡು ಮೂರು ದಿನಗಳ ಕಾಲ ಇಟ್ಟುಕೊಳ್ಳುತ್ತಿರುವುದನ್ನು ನೋಡಿದ ಕುಟುಂಬಸ್ಥರು ಮಕ್ಕಳ ಕುರಿತಾಗಿ ತಿವಾರಿಯನ್ನು ಪ್ರಶ್ನಿಸಿದಾಗ, ತನ್ನ ಗೆಳೆಯನ ಮಗು. ಅತ ಒಂದೆರಡು ದಿನ ಊರಿಗೆ ಹೋಗಿದ್ದಾನೆ ಹೀಗಾಗಿ ಮಗು ತಮ್ಮ ಮನೆಯಲ್ಲಿರುತ್ತದೆ ಎಂದು ತಿಳಿಸುತ್ತಿದ್ದರಂತೆ.

ತಿವಾರಿ ತನ್ನ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಹೀಗೆ ಮಾಡುತ್ತಿದ್ದರಾದರೂ ಪೊಲೀಸರಿಗೆ ಅವರನ್ನು ಬಂಧಿಸುವುದು ಅನಿವಾರ್ಯ. ತಿವಾರಿ ವರ್ತನೆಯ ಹಿಂದೆ ನೋವಿನ ಘಟನೆ ಇದ್ದರೂ ಮಕ್ಕಳ ಅಪಹರಣ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂಬುವುದು ಕೂಡಾ ಸತ್ಯ.