ಹೈದರಾಬಾದ್[ಆ.18]: ರೈಲ್ವೇ ಹಳಿಯನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ರೈಲ್ವೇ ಭದ್ರತ ಸಿಬ್ಬಂದಿ ಭಾನುವಾರದಂದು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. 

ಹೈದರಾಬಾದ್ ನ ರಾಮಿರೆಡ್ಡಿ ಎಂಬಾತನಿಗೆ ವಿಡಿಯೋ ಮಾಡುವ ಗೀಳು. ಇದಕ್ಕಾಗಿ ಆತ ರೈಲು ಹಳಿಯ ಮೇಲೆ ಗ್ಯಾಸ್ ತುಂಬಿದ ಸಿಲಿಂಡರ್, ಪಟಾಕಿ ಹಾಗೂ ಆಟದ ಸಾಮಾನುಗಳನ್ನಿಟ್ಟು ವಿಡಿಯೋ ಚಿತ್ರೀಕರಿಸಿದ್ದ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದ. 

ಇಂತಹ ಅಪಾಯಕಾರಿ ವಿಡಿಯೋ ಚಿತ್ರೀಕರಿಸಿದ ಹಾಗೂ ಹಳಿಯನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಗಮನಿಸಿದ ಹೈದರಾಬಾದ್ RPF ಸಿಬ್ಬಂದಿ ನರಸಿಂಹ, ಕೂಡಲೇ ಟ್ವೀಟ್ ಮೂಲಕ ರೈಲ್ವೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ರಾಮಿರೆಡ್ಡಿಯನ್ನು ಬಂಧಿಸಿದ್ದಾರೆ. 

ಪೊಲೀಸರಿಗೆ ಸ್ಪಷ್ಟನೆ ನೀಡಿರುವ ರಾಮಿರೆಡ್ಡಿ 'ನನಗೆ ಯೂಟ್ಯೂಬ್ ಬಹಳ ಇಷ್ಟ. ನಾನು ಯಾವತ್ತೂ ವಿಡಿಯೋಗಳನ್ನು ವೀಕ್ಷಿಸುತ್ತಿರುತ್ತೇನೆ. ರೈಲ್ವೇ ಟ್ರ್ಯಾಕ್ ಮೆಲೆ ವಿವಿಧ ವಸ್ತುಗಳನ್ನಿಟ್ಟು ಚಿತ್ರೀಕರಿಸಿದ ವಿಡಿಯೋಗಳನ್ನು ನಾನು ನೋಡಿದ್ದೇನೆ. ಇಂತಹುದೇ ವಿಡಿಯೋ ನನು ಕೂಡಾ ಮಾಡಬೇಕು ಎಂಬ ಆಸೆಯಾಯ್ತು. ಹೀಗಾಗಿ ಈ ವಿಡಿಯೋಗಳನ್ನು ಚಿತ್ರೀಕರಿಸಿ ಶೇರ್ ಮಾಡಿದೆ. ಈ ಎಲ್ಲಾ ವಿಡಿಯೋಗಳನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹೀಗೆ ಮಾಡುವುದು ಅಪರಾಧ ಎಂದು ನನಗೆ ತಿಳಿದಿರಲಿಲ್ಲ' ಎಂದಿದ್ದಾನೆ.

ಸದ್ಯ ರಾಮಿರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ರಿಮಾಂಡ್ ಹೋಂಗೆ ಕಳುಹಿಸಿದ್ದಾರೆ.