ಹಾರ್ದೋಯಿ[ಸೆ.12]: ಅದೃಷ್ಟ ಒಲಿದರೆ ಜಗತ್ತನ್ನೇ ಗೆಲ್ಲಬಹುದು ಆದರೆ ಇದೇ ಅದೃಷ್ಟ ಕೈಕೊಟ್ಟರೆ ಗೆದ್ದದ್ದೆಲ್ಲಾ ಕೈಜಾರಿ ಹೋಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆಯಂತಿದೆ ಉತ್ತರ ಪ್ರದೇಶದ ಹಾರ್ದೋಯಿಯಲ್ಲಿ ನಡೆದ ಘಟನೆ. ಮನೆ ನಿರ್ಮಿಸಲು ಅಡಿಪಾಯ ತೆಗೆದಾಗ 25 ಲಕ್ಷ ಮೌಲ್ಯದ ನಿಧಿ ಪತ್ತೆಯಾಗಿದೆಯಾದರೂ, ಇದು ಉಳಿಸಿಕೊಳ್ಳಲು ಮತ್ರ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ

ಉತ್ತರ ಪ್ರದೇಶದ ಸಾಂಡಿ ಥಾನಾ ಕ್ಷೇತ್ರದ ಖಿಡ್ಕಿಯಾ ಪ್ರದೇಶದಲ್ಲಿ ಮನೆ ನಿರ್ಮಿಸಲು ಅಡಿಪಾಯ ತೆಗೆಯುತ್ತಿದ್ದಾಗ 25 ಲಕ್ಷ ರೂಪಾಯಿ ಮೌಲ್ಯದ ನಿಧಿ ಪತ್ತೆಯಾಗಿದೆ. ನೋಡ ನೊಡುತ್ತಿದ್ದಂತೆಯೇ ಈ ಸುದ್ದಿ ಊರಿನೆಲ್ಲೆಡೆ ಹಬ್ಬಿದೆ. ಅಂತಿಮವಾಗಿ ಪೊಲೀಸರ ಕಿವಿಗೂ ಈ ಸುದ್ದಿ ತಲುಪಿದ್ದು, ವಿಚಾರಣೆಗೆ ವ್ಯಕ್ತಿಯ್ನನು ಕರೆದಿದ್ದಾರೆ. ಆರಂಭದಲ್ಲಿ ವ್ಯಕ್ತಿ ಯಾವುದೇ ನಿಧಿ ಸಿಕ್ಕಿಲ್ಲ ಎಂದು ವಾದಿಸಿದರೂ, ವಿಷಯ ಮುಚ್ಚಿಟ್ಟರೆ ಶಿಕ್ಷೆಗೆ ಗುರಿಯಾಗಬಹುದೆಂದು ಪೊಲೀಸರು ಹೆದರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. 

ನಿಧಿಯಲ್ಲಿ ಏನೇನಿತ್ತು?

ಸದ್ಯ ಪೊಲೀಸರು 25 ಲಕ್ಷ ಮೌಲ್ಯದ ನಿಧಿಯನ್ನು ವಶಕ್ಕೆ ಪಡೆದಿದ್ದಾರೆ. ನಿಧಿ ಕುರಿತು ಮಾಹಿತಿ ನೀಡಿರುವ ಹರ್ದೋಯ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅಲೋಕ್​ ಪ್ರಿಯದರ್ಶಿ 'ನಿಧಿಯಲ್ಲಿರುವ ಆಭರಣಗಳು ಸುಮಾರು 100 ವರ್ಷ ಹಳೆಯದಗಿರಬಹುದು. 650 ಗ್ರಾಂ ಚಿನ್ನ ಹಾಗೂ 4.53 ಕೆ.ಜಿ ಬೆಳ್ಳಿಯ ಆಭರಣಗಳು ಇದರಲ್ಲಿವೆ. ಈ ನಿಧಿ ವ್ಯಕ್ತಿಯ ಹೆಸರಲ್ಲಿರುವ ಜಾಗದಲ್ಲಿ ಪತ್ತೆಯಾಗಿದ್ದರೂ ಸೂಕ್ತ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆದಿದ್ದೇವೆ. ಅಲ್ಲದೇ ನಿಧಿ ಸರ್ಕಾರದ ಸ್ವತ್ತು. ಇದನ್ನು ಇಟ್ಟುಕೊಳ್ಳುವುದು ಅಪರಾಧ' ಎಂದಿದ್ದಾರೆ.