ನಗರದ ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಕಲಿ ಪತ್ರಕರ್ತ ಹಾಗೂ ಆತನ ಸಹಚರನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಗರದ ಸಾಫ್ಟ್‌ವೇರ್ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಕಲಿ ಪತ್ರಕರ್ತ ಹಾಗೂ ಆತನ ಸಹಚರನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೇಷಾದ್ರಿಪುರದ ಅಮೂಲ್ ಹಸನ್ ಹಾಗೂ ಮಂಗಳೂರು ಉರುಂದಾಡಿ ಗುಡ್ಡ ರಾಕೇಶ್ ಬಂಧಿತರು. ಆರೋಪಿಗಳಿಂದ 1 ಕೆ.ಜಿ. ಚರಸ್ ಜಪ್ತಿ ಮಾಡಲಾಗಿದೆ. ಈ ಆರೋಪಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಬೀದರ್ ಮೂಲದ ವ್ಯಕ್ತಿ ಪತ್ತೆಗೆ ತನಿಖೆ ಮುಂದುವರಿಸಿದ್ದೇವೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಅಮೂಲ್ ಹಸನ್ ಮೂಲತಃ ಮಂಗಳೂರಿನವನಾಗಿದ್ದು, ಆತ ಪತ್ರಿಕೋದ್ಯಮ ಪದವೀಧರ. ಕೆಲಸ ಅರಸಿ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದ ಅವನು, ಮೋಜಿನ ಜೀವನ ಸೆಳೆತಕ್ಕೊಳಗಾಗಿ ಅಡ್ಡ ದಾರಿ ತುಳಿದಿದ್ದ. ಸುಲಭವಾಗಿ ಹಣ ಸಂಪಾದನೆಗೆ ಹಸನ್, ತನ್ನೂರಿನವನೇ ಆದ ರಾಕೇಶ್ ಜತೆ ಸೇರಿ ಮಾದಕ ವಸ್ತು ದಂಧೆಗಿಳಿದಿದ್ದ. ಬಳಿಕ ಬೀದರ್‌ನ ದೇವದಾಸ್‌ನಿಂದ ಡ್ರಗ್ಸ್ ಪಡೆದು ಬಳಿಕ, ನಗರದಲ್ಲಿ ಮಾರಾಟ ಮಾಡುತ್ತಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೆಚ್ಚುವರಿ ಆಯುಕ್ತರು ಹೇಳಿದರು.

ಡ್ರಗ್ಸ್ ದಂಧೆಗೆ ಪತ್ರಕರ್ತ ಕಾರ್ಡ್ ರಕ್ಷಣೆ: ಆರಂಭದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅಮೂಲ್, ಆ ನಂತರ ತಾನು ‘ಆಲ್ ಇಂಡಿಯಾ ನ್ಯೂಸ್’ ವಾಹಿನಿಯ ವರದಿಗಾರನೆಂದು ಹೇಳಿಕೊಂಡು ತಿರುಗುತ್ತಿದ್ದ. ಕ್ರಮೇಣ ಅದೇ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿಕೊಂಡು ಆತ, ತನ್ನ ಅಕ್ರಮ ಚಟುವಟಿಕೆಗಳ ರಕ್ಷಣೆಗೆ ಅದನ್ನು ಬಳಸಿಕೊಳ್ಳುತ್ತಿದ್ದ. ಊರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ರಾಕೇಶ್, ಸುಲಭವಾಗಿ ಹಣ ಸಿಗುತ್ತದೆಂಬ ಕಾರಣಕ್ಕೆ ಅಮೂಲ್ ಜತೆ ಕೈ ಜೋಡಿಸಿದ್ದ. ಆರು ತಿಂಗಳಿಂದ ಅವರು ದಂಧೆಯಲ್ಲಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೀದರ್‌ಗೆ ಹೋಗಿ ದೇವದಾಸ್‌ನಿಂದ ಮಾದಕ ವಸ್ತುಗಳನ್ನು ತೆಗೆದುಕೊಂಡು ಬರುವುದು ರಾಕೇಶ್ ಕೆಲಸವಾದರೆ, ಗಿರಾಕಿಗಳನ್ನು ಹುಡುಕುವ ಕಾರ್ಯದಲ್ಲಿ ಅಮೂಲ್ ತೊಡಗುತ್ತಿದ್ದ. ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳೇ ಇವರ ಗುರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದರು.

ನನಗೆ ಪೊಲೀಸ್ ಅಧಿಕಾರಿಗಳೇ ಗೊತ್ತು ಅಂದಿದ್ದ: ನಾನು ನ್ಯೂಸ್ ಚಾನೆಲ್ ರಿಪೋರ್ಟರ್, ನನಗೆ ಆಯುಕ್ತರು ಸೇರಿ ಎಲ್ಲ ಪೊಲೀಸರು ಗೊತ್ತು. ಹಾಗಾಗಿ ನನ್ನ ಜತೆ ವ್ಯವಹಾರದಲ್ಲಿ ನಿಮಗೆ ಯಾವುದೇ ರೀತಿ

ತೊಂದರೆ ಆಗುವುದಿಲ್ಲ ಎಂದು ಮಾದಕ ವಸ್ತುಗಳನ್ನು ಖರೀದಿಸುವರಿಗೆ ಅಮೂಲ್ ಅಭಯ ನೀಡುತ್ತಿದ್ದ. ಆತ ವಿರುದ್ಧ ಆಗ್ನೇಯ ವಿಭಾಗದಲ್ಲೇ ಹಿಂದೆ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.