* ವಿದ್ಯಾರ್ಥಿ ವೀಸಾ ಆಧಾರದಲ್ಲಿ ನಗರಕ್ಕೆ ಬಂದಿದ್ದ ಆರೋಪಿ* ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ* ಆತನ ಬಂಧನಕ್ಕೆ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದ ಪೊಲೀಸರು* ನೈಜೀರಿಯಾ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಯಿಂದ ಬಂಧನ* ಪರರ ಕಾರಿನ ಫೋಟೋ ತೆಗೆದು ತನ್ನದೆಂದು ಹೇಳಿ ಮಾರಾಟ ಜಾಹೀರಾತು ನೀಡುತ್ತಿದ್ದ ಆರೋಪಿ* ಗ್ರಾಹಕರೊಬ್ಬರಿಂದ 5 ಲಕ್ಷ ರೂ. ಪಡೆದು ವಂಚಿಸಿದ್ದ ವಿದೇಶಿ ಪ್ರಜೆ
ಬೆಂಗಳೂರು: ಓಎಲ್ಎಕ್ಸ್ ಜಾಲತಾಣದಲ್ಲಿ ಬೇರೆಯವರ ಐಷಾರಾಮಿ ಕಾರುಗಳ ಫೋಟೋ ಹಾಕಿ, ಗ್ರಾಹಕ ರಿಂದ ಹಣ ಪಡೆದು ವಂಚನೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸತತ ಒಂದು ವರ್ಷ ಕಾಲ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅ.19ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನೈಜಿರಿಯಾ ಮೂಲದ ಡಿಗೂ ಕ್ರಿಸ್ಟಿಯಾ (28) ಬಂಧಿತ. ವಿದ್ಯಾರ್ಥಿ ವೀಸಾದಡಿ ನಗರದ ಟಿ.ಸಿ.ಪಾಳ್ಯದಲ್ಲಿ ಕಳೆದ ಹಲವು ವರ್ಷಗಳಿಂದ ನೆಲೆಸಿದ್ದ ಕ್ರಿಸ್ಟಿಯಾ, ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಸಂಬಂಧ 2015ರ ಸೆಪ್ಟೆಂಬರ್ನಲ್ಲಿ ಆತನನ್ನು ಹಿಡಿಯಲು ಹೋಗಿದ್ದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಹೀಗಾಗಿ ಆರೋಪಿ ಪತ್ತೆಗಾಗಿ ಲುಕ್ಔಟ್ ನೋಟೀಸ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೈಜೀರಿಯಾಗೆ ತೆರಳಿದ್ದ ಆರೋಪಿಯನ್ನು ಅಲ್ಲಿನ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ರಾಜ್ಯದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆತನಿಂದ ಲ್ಯಾಪ್ಟಾಪ್, ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕ್ರಿಸ್ಟಿಯಾ ಎಂ.ಜಿ.ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸುತ್ತಿದ್ದ ಕಾರುಗಳು ಹಾಗೂ ಶೋರೂಮ್'ಗಳಲ್ಲಿದ್ದ ಹೊಸ ಕಾರುಗಳ ಫೋಟೋ ತೆಗೆದು ಓಎಲ್'ಎಕ್ಸ್'ನಲ್ಲಿ ಹಾಕಿ, ಅದು ತನ್ನ ಕಾರೆಂದು, ಅದನ್ನು ಮಾರಾಟ ಮಾಡುತ್ತಿರುವುದಾಗಿ ಪ್ರಕಟಣೆ ನೀಡುತ್ತಿದ್ದ. ಇದೇ ರೀತಿ ಕಳೆದ ವರ್ಷ ಉದ್ಯಮಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್'ನಲ್ಲಿ ವಿದೇಶಿ ಬ್ರಾಂಡ್'ನ ಐಶಾರಾಮಿ ಕಾರು ನಿಲ್ಲಿಸಿ ಹೋಗಿದ್ದರು. ಆ ಕಾರಿನ ಫೋಟೋ ತೆಗೆದ ಆರೋಪಿ, ಓಎಲ್ಎಕ್ಸ್'ನಲ್ಲಿ ಫೋಟೋದೊಂದಿಗೆ ಜಾಹಿರಾತು ಪ್ರಕಟಿಸಿದ್ದ. ನಂತರ ಗ್ರಾಹಕರೊಬ್ಬರು ಕರೆ ಮಾಡಿ ಕಾರಿನ ಬಗ್ಗೆ ವಿಚಾರಿಸಿದ್ದರು. ಈ ವೇಳೆ ‘ನಾನು ವಿದೇಶಕ್ಕೆ ಹೋಗುತ್ತಿದ್ದೇನೆ. ಏರ್ಪೋರ್ಟ್ನಲ್ಲಿ ಕಾರು ನಿಲ್ಲಿಸಿದ್ದೇನೆ. ನೋಡಿಕೊಂಡು ಹೋಗಿ' ಎಂದು ಹೇಳಿದ್ದ. ಅದರಂಥೆ ಏರ್ಪೋರ್ಟ್'ಗೆ ತೆರಳಿ ಕಾರು ನೋಡಿದ್ದ ವ್ಯಕ್ತಿ, ಕೊಳ್ಳಲು ಒಪ್ಪಿಕೊಂಡಿದ್ದರು. ಈ ವೇಳೆ ಅವರಿಂದ ತನ್ನ ಖಾತೆಗೆ 5 ಲಕ್ಷ ರೂ. ಜಮಾ ಮಾಡಿಸಿಕೊಂಡ ಆರೋಪಿ, ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕ್ರಿಸ್ಟಿಯಾ ಇದೇ ರೀತಿ ಈ ಹಿಂದೆ ಸಾಕಷ್ಟುಮಂದಿಗೆ ವಂಚನೆ ಮಾಡಿ ಪರಾರಿಯಾಗಿದ್ದ. ಬಳಿಕ ಸ್ಥಳ ಬದಲಾಯಿಸಿ ಮತ್ತೆ ಕೆಲವರಿಗೆ ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
