Asianet Suvarna News Asianet Suvarna News

ಮಕ್ಕಳ ಸಾಕ್ಷ್ಯದಿಂದ ತಾಯಿ ಕೊಂದ ತಂದೆಗೆ ಜೀವಾವಧಿ ಶಿಕ್ಷೆ

ಪರ ಪುರುಷನೊಂದಿಗೆ ಅನೈತಿಕ ಸಂಬಂಧವಿರುವ ಅನುಮಾನದ ಮೇಲೆ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿದ್ದ ವ್ಯಕ್ತಿಯ ವಿರುದ್ಧ ಮಕ್ಕಳೇ ಸಾಕ್ಷ್ಯ ನುಡಿದಿದ್ದು ಇದರಿಂದ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

Man Get Life Sentence For Killing Wife
Author
Bengaluru, First Published Aug 14, 2018, 8:03 AM IST

ಬೆಂಗಳೂರು :  ತಾಯಿಯನ್ನು ಕೊಲೆಗೈದ ತಂದೆಯ ವಿರುದ್ಧ ಮಕ್ಕಳೇ ಸಾಕ್ಷ್ಯ ನುಡಿದು ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಕೊಡಿಸಿದ ಅಪರೂಪದ ಪ್ರಕರಣವಿದು!

ಪರ ಪುರುಷನೊಂದಿಗೆ ಅನೈತಿಕ ಸಂಬಂಧವಿರುವ ಅನುಮಾನದ ಮೇಲೆ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದು, ಮೃತದೇಹವನ್ನು ಮನೆಯಲ್ಲಿಯೇ ಹೂತಿದ್ದ ಮೈಸೂರಿನ ಎಚ್‌.ಡಿ.ಕೋಟೆಯ ಗೆಂಡೆಗೌಡನ ಕಾಲೋನಿಯ ದಾಸಪ್ಪಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

ದಾಸಪ್ಪನ ಮಕ್ಕಳು ನುಡಿದ ಸಾಕ್ಷ್ಯ ಪರಿಗಣಿಸಿದ ಹೈಕೋರ್ಟ್‌, ಪತ್ನಿ ವಸಂತಮ್ಮಳನ್ನು ದಾಸಪ್ಪನೇ ಕೊಲೆ ಮಾಡಿರುವುದಾಗಿ ತೀರ್ಮಾನಿಸಿತು. ಹಾಗೆಯೇ, ಆತನಿಗೆ ಕೌಟುಂಬಿಕ ದೌರ್ಜನ್ಯ, ಕೊಲೆ ಮತ್ತು ಸಾಕ್ಷ್ಯಾಧಾರ ನಾಶ ಪ್ರಕರಣದಲ್ಲಿ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು.

ಇದರೊಂದಿಗೆ ಮಕ್ಕಳು, ತನ್ನ ತಾಯಿಯ ಮೃತ ದೇಹವು ಮನೆಯಲ್ಲಿಯೇ ಕೊಳೆತು ನಾರುವಂತೆ ಮಾಡಿದ್ದ ತಂದೆಯನ್ನು ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ.

ಶೀಲ ಶಂಕಿಸಿ ಕೊಲೆ:

ದಾಸಪ್ಪ ಹಾಗೂ ವಸಂತಮ್ಮ 28 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿ 2003ರಿಂದ ಗೆಂಡೇಗೌಡನ ಕಾಲೋನಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ದಾಸಪ್ಪ ಸಂಸಾರ ಸಾಗಿಸಲು ದಿನಗೂಲಿ ಮಾಡುತ್ತಾ ಟೀ ಅಂಗಡಿ ಸಹ ನಡೆಸುತ್ತಿದ್ದ. ದಂಪತಿಗೆ ನಾಲ್ವರು ಮಕ್ಕಳು. ಮೊದಲ ಪುತ್ರ ಅನೀಶ್‌ ಮೈಸೂರಿನಲ್ಲಿ ಉದ್ಯೋಗ ಮಾಡಿಕೊಂಡು ನೆಲೆಸಿದ್ದ. ಮೊದಲ ಪುತ್ರಿ ಆಶಾ, ಅಣ್ಣನ ಜತೆಯಲ್ಲಿ ನೆಲೆಸಿ ವ್ಯಾಸಂಗ ಮಾಡುತ್ತಿದ್ದಳು. ಮೂರನೇ ಪುತ್ರ ಅರುಣ್‌ ಮತ್ತು ನಾಲ್ಕನೇ ಪುತ್ರಿ ಅನುಘ್ನ ತಂದೆ-ತಾಯಿಯೊಂದಿಗೆ ನೆಲೆಸಿದ್ದರು.

2010ರ ಆ.4ರಂದು ಮಧ್ಯಾಹ್ನ 2ಗಂಟೆಗೆ ದಾಸಪ್ಪ, ವಸಂತಮ್ಮಳ ಕೊರಳಿಗೆ ಹಗ್ಗ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಯಾರಿಗೂ ಅನುಮಾನ ಬರಬಾರದು ಎಂಬ ಕಾರಣಕ್ಕೆ ಮೃತದೇಹವನ್ನು ಅಡುಗೆ ಮನೆಯ ಒಲೆ ಪಕ್ಕದಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದ. ತಾಯಿ ಕಾಣದಿದ್ದಾಗ ಪುತ್ರ ಅರುಣ್‌ ಮತ್ತು ಪುತ್ರಿ ಅನುಘ್ನ ತಂದೆ ಬಳಿ ವಿಚಾರಿಸಿದರೆ, ತವರು ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದ. ಈ ವಿಚಾರವನ್ನು ಅರುಣ್‌ ತನ್ನ ಸೋದರ ಅನೀಶ್‌ಗೆ ದೂರವಾಣಿ ಮೂಲಕ ತಿಳಿಸಿದ್ದ. ಅರುಣ್‌ ತನ್ನ ಸಂಬಂಧಿಕರೊಂದಿಗೆಲ್ಲ ವಿಚಾರಿಸಿದರೂ ಯಾವುದೇ ಸುಳಿವು ಸಿಗದೇ ಮನೆಗೆ ಬಂದಿದ್ದ.

ಸುಳಿವು ನೀಡಿದ್ದ ದುರ್ವಾಸನೆ:

ಈ ಮಧ್ಯೆ ಮನೆಯಲ್ಲಿ ದುರ್ವಾಸನೆ ಬರುತ್ತಿದ್ದನ್ನು ಅನೀಶ್‌ ಗಮನಿಸಿ ಶೋಧನೆ ನಡೆಸಿದ್ದ. ಅಡುಗೆ ಮನೆಯ ಒಲೆ ಪಕ್ಕದಲ್ಲಿ ಮಣ್ಣು ಮೇಲೆದ್ದಿರುವುದು ಕಣ್ಣಿಗೆ ಬಿತ್ತು. ಅಲ್ಲಿಂದಲೇ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಅನೀಶ್‌, ಕೂಡಲೇ ಎಚ್‌.ಡಿ.ಕೋಟೆ ಠಾಣೆಗೆ ತೆರಳಿ ದೂರು ನೀಡಿದ್ದ. ಪೊಲೀಸರು ಮನೆಗೆ ಬಂದು ಒಲೆ ಪಕ್ಕದಲ್ಲಿ ಹೂತಿದ್ದ ವಸಂತಮ್ಮಳ ಮೃತದೇಹ ಹೊರತೆಗೆದಿದ್ದರು. ಬಳಿಕ ದಾಸಪ್ಪನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದರು.

ಸಾಕ್ಷ್ಯ ನುಡಿದಿದ್ದ ಮಕ್ಕಳು:

ಅಧೀನ ನ್ಯಾಯಾಲಯದ ಮುಂದೆ ಹಾಜರಾಗಿದ್ದ ದಾಸಪ್ಪನ ನಾಲ್ವರು ಮಕ್ಕಳು ಸಹ, ತನ್ನ ತಂದೆಯು ತಾಯಿ ಶೀಲದ ಬಗ್ಗೆ ಸದಾ ಅನುಮಾನಿಸಿದ್ದರು. ಇದೇ ವಿಚಾರವಾಗಿ ಪದೇ ಪದೆ ಮನೆಯಲ್ಲಿ ಗಲಾಟೆ ನಡೆಸಿ ತಾಯಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಸಾಕ್ಷ್ಯ ನುಡಿದ್ದರು. ಮಕ್ಕಳ ಸಾಕ್ಷ್ಯ ಮತ್ತು ತನಿಖೆಯಲ್ಲಿ ಪೊಲೀಸರು ಒದಗಿಸಿದ ಇತರೆ ಸಾಕ್ಷ್ಯಾಧಾರ ಪರಿಗಣಿಸಿದ್ದ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯವು ದಾಸಪ್ಪನ್ನು ದೋಷಿ ಎಂದು ತೀರ್ಮಾನಿಸಿ, ಜೀವಾವಧಿ ವಿಧಿಸಿ 2013ರ ಮೇ 9ರಂದು ಆದೇಶಿಸಿತ್ತು. ಈ ಆದೇಶ ರದ್ದುಕೋರಿ ದಾಸಪ್ಪ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಹೈಕೋರ್ಟ್‌ ಸಹ ಮಕ್ಕಳ ಸಾಕ್ಷ್ಯ ಪರಿಗಣಿಸಿ ದಾಸಪ್ಪಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು.

Follow Us:
Download App:
  • android
  • ios