ನವದೆಹಲಿ[ಜ.06]: ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್ ಪುರ್ ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಸಂಭ್ರಮಾಚರಣೆ ವೇಳೆ ಸಿಡಿಸಿದ ಗುಂಡು 8 ವರ್ಷದ ಮಗನನ್ನು ಬಲಿ ಪಡೆದುಕೊಂಡಿದೆ. ಗುಂಡು ಸಿಡಿಸದ ವ್ಯಕ್ತಿಯನ್ನು ಪೊಲೀಸರು ಬಂಧಿಸಲಾಗಿದ್ದು, ಆರೋಪಿಯನ್ನು ಯಾಸೀನ್ ಎಂದು ಗುರುತಿಸಲಾದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಡಿಸೆಂಬರ್ 31ರಂದು ನ್ಯೂ ಉಸ್ಮಾನ್ ಪುರ್ ಠಾಣೆಯಲ್ಲಿ ವ್ಯಕ್ತಿಯೊಬ್ಬನಿಗೆ ಗುಂಡೇಟು ತಗುಲಿರುವ ಮಾಹಿತಿ ಲಭ್ಯವಾಗಿತ್ತು. ಹೊಸ ವರ್ಷದ ಸಂಭ್ರಮಾಚರಣೆ ವೇಳೆ 8 ವರ್ಷದ ಹುಡುಗ ರೆಹಾನ್ ಎಂಬಾತನ ಬಲ ಕೆನ್ನೆಗೆ ಗುಂಡೇಟು ತಗುಲಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಯಾವುದೇ ಪ್ರಯೋಜನವಾಇಲ್ಲ. ಆತ ದಾರಿಮಧ್ಯೆಯೇ ಕೊನೆಯುಸಿರೆಳೆದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ' ಎಂದಿದ್ದಾರೆ.

ಈ ಕುರಿತಾಗಿ ಮತ್ತಷ್ಟು ಮಾಹಿತಿ ನೀಡಿದ ಪೊಲೀಸ್ ಉಪ ಆಯುಕ್ತ ಅತುಲ್ ಕುಮಾರ್ ಠಾಕುರ್ 'ಮೃತ ಬಾಲಕನ ತಂದೆ ಯಾಸಿನ್ ಎಂಬರು ಫೈರಿಂಗ್ ನಡೆಸಿದ್ದರೆಂದು ತಿಳಿದು ಬಂದಿದೆ. ಶನಿವಾರದಂದು ಯಾಸಿನ್ ರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ತಾನು ಉತ್ತರ ಪ್ರದೆಶದ ಲೋನಿ ಎಂಬ ಪ್ರದೇಶದ ನಿವಾಸಿ ರವಿ ಕಶ್ಯಪ್ ರಿಂದ ರಿವಾಲ್ವರ್ ಖರೀದಿಸಿದ್ದೆ ಎಂದಿದ್ದಾನೆ. ಆತ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆದರೆ ದುರಾದೃಷ್ಟವಶಾತ್ ಇದು ಆತನ ಮಗನನ್ನೇ ಬಲಿ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಶ್ಯಪ್ ನನ್ನೂ ಬಂಧಿಸಲಾಗಿದ್ದು, ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ' ಎಂದಿದ್ದಾರೆ.