ಮೊಬೈಲ್‌ನಲ್ಲಿ ಮಾತನಾಡುವಾಗ ಮನೆಯ ಕಟ್ಟಡದ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ವಿದ್ಯುತ್‌ ತಂತಿ ಮೇಲೆ ಬಿದ್ದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಮತ್ತಿಕೆರೆ 13ನೇ ಅಡ್ಡರಸ್ತೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಬೆಂಗಳೂರು(ಜೂ.22): ಮೊಬೈಲ್‌ನಲ್ಲಿ ಮಾತನಾಡುವಾಗ ಮನೆಯ ಕಟ್ಟಡದ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ವಿದ್ಯುತ್‌ ತಂತಿ ಮೇಲೆ ಬಿದ್ದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಮತ್ತಿಕೆರೆ 13ನೇ ಅಡ್ಡರಸ್ತೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಇಲ್ಲಿನ ನಿವಾಸಿ ವಿದ್ಯಾಶಂಕರ್‌ (31) ಮೃತ ದುರ್ದೈವಿ. ಮನೆಯಲ್ಲಿ ಸೋದರನ ಜತೆ ಮದ್ಯ ಸೇವನೆ ಬಳಿಕ ವಿದ್ಯಾಶಂಕರ್‌ ಅವರು, ಬಾಲ್ಕನಿಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ವಿದ್ಯಾಶಂಕರ್‌ ಮೂಲತಃ ಉತ್ತರ ಪ್ರದೇಶದವರಾಗಿದ್ದು, ತಮ್ಮ ಸೋದರ ವಿದ್ಯಾದೀಪಕ್‌ ಮಿಶ್ರಾ ಜತೆ ಅವರು ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ಸೋದರರು, ರಾತ್ರಿ 1 ಗಂಟವೆರೆಗೂ ಮನೆಯಲ್ಲಿ ಮದ್ಯಪಾನ ಮಾಡಿದ್ದರು. ಆನಂತರ ದೀಪಕ್‌ ನಿದ್ರೆಗೆ ಜಾರಿದರೆ, ವಿದ್ಯಾಶಂಕರ್‌ ಅವರು ಮೊಬೈಲ್‌ನಲ್ಲಿ ಸಂಭಾಷಿಸುತ್ತ ಕುಳಿತಿದ್ದರು. ಹಾಗೆ ಮಾತನಾಡುತ್ತ ಮುಂಜಾನೆ 4.30 ಗಂಟೆಗೆ ಬಾಲ್ಕನಿಗೆ ಬಂದಿರುವ ಅವರು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ರಸ್ತೆ ಬದಿ ಹಾದು ಹೋಗಿರುವ ವಿದ್ಯುತ್‌ ತಂತಿ ಮೇಲೆ ಅವರು ಬೀಳುತ್ತಿದ್ದಂತೆಯೇ ತಂತಿ ತುಂಡಾಗಿ ಸುತ್ತಮುತ್ತಲ ರಸ್ತೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಯಿತು. ಆ ವೇಳೆ ರಕ್ಷಣೆಗೆ ವಿದ್ಯಾ ಶಂಕರ್‌ನ ಚೀರಾಟ ಕೇಳಿ ನೆರೆಹೊರೆಯವರು ಎಚ್ಚರಗೊಂಡಿದ್ದಾರೆ. ಆದರೆ ಎತ್ತರದಿಂದ ಬಿದ್ದಿದ್ದರ ಜತೆಗೆ, ವಿದ್ಯುತ್‌ ಸಹ ಪ್ರವಹಿಸಿದ್ದರಿಂದ ವಿದ್ಯಾಶಂಕರ್‌ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.