ನವದೆಹಲಿ[ಏ.24]: ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಮೊದಲ ರಾಜಕೀಯೇತರ ಸಂದರ್ಶನ ನೀಡಿದ್ದಾರೆ. ಪ್ರಧಾನಿ ಮೋದಿ ಇದೇ ಮೊದಲ ಬಾರಿ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಇಂಟರೆಸ್ಟಿಂಗ್ ವಿಚಾರಗಳು ಹೀಗಿವೆ.

"

ನಿಮಗೆ ಮಾವಿನ ಹಣ್ಣು ಎಂದರೆ ಇಷ್ಟವೇ? 

ನಾನು ಮವಿನ ಹಣ್ಣು ತಿನ್ನತ್ತೇನೆ ಹಾಗೂ ಮಾವು ನನಗೆ ಬಹಳ ಇಷ್ಟ. ನಾನು ಚಿಕ್ಕವನಿದ್ದಾಗ ನನ್ನ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಮಾವಿನ ಹಣ್ಣು ಖರೀದಿಸುವುದು ಅಸಾಧ್ಯವಾಗಿತ್ತು. ಆದರೆ ನಾವು ಮಾವಿನ ತೋಪಿಗೆ ತೆರಳಿ ಮರ ಹತ್ತಿ ತಾಜಾ ಹಣ್ಣುಗಳನ್ನು ತಿನ್ನುತ್ತಿದ್ದೆವು.

ನೀವು ಒಂದು ದಿನ ಪ್ರಧಾನಿಯಾಗುತ್ತೀರೆಂದು ಅಂದುಕೊಂಡಿದ್ದಿರಾ?

ನಾನು ಪ್ರಧಾನಿಯಾಗಬೇಕೆಂದು ಬಯಸಿರಲಿಲ್ಲ ಹಾಗೂ ಜನ ಸಾಮಾನ್ಯರ ಮನಸ್ಸಿಗೆ ಈ ಯೋಚನೆ ಕೂಡಾ ಬರುವುದಿಲ್ಲ. ಹಾಗೂ ನನ್ನ ಕುಟುಂಬದ ಹಿನ್ನೆಲೆ ಗಮನಿಸಿದರೆ ನನಗೆ ಸಾಮಾನ್ಯ ಕೆಲಸ ಸಿಕ್ಕಿದರೂ ನನ್ನ ಅಮ್ಮ ಊರಿಡೀ ಬೆಲ್ಲ ಹಂಚುತ್ತಿದ್ದರು. ಚಿಕ್ಕವನಿದ್ದಾಗ ಗಣ್ಯ ವ್ಯಕ್ತಿಗಳ ಜೀವನಾಧಾರಿತ ಪುಸ್ತಕ ಓದುವ ಹವ್ಯಾಸ ನನಗಿತ್ತು. ಸೈನಿಕರನ್ನು ನೋಡಿದರೆ ನಾನು ಕೂಡಾ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದೆ. ನಾನು ಪ್ರಧಾನಿಯಾಗಬೇಕೆಂಬ ಯೋಚನೆ ಮಾಡಿರಲಿಲ್ಲ. ನಾನೇನು ಯೋಚಿಸಿರಲಿಲ್ಲವೋ ಆ ಸ್ಥಾನಕ್ಕೇರಿದ್ದೇನೆ. ಸುತ್ತಾಡುತ್ತಾ ಇಲ್ಲಿಗೆ ತಲುಪಿದ್ದೇನೆ.

"

ನಿಮಗೆ ಕೋಪ ಬರುತ್ತಾ?

ಇಷ್ಟು ದೀರ್ಘ ಸಮಯದವರೆಗೆ ಪ್ರಧಾನಿಯಾಗಿದ್ದೇನೆ ಆದರೆ ನನಗೆ ಒಂದು ಬಾರಿಯೂ ಕೋಪ ತೋರ್ಪಡಿಸುವ ಪರಿಸ್ಥಿತಿ ಎದುರಾಗಿಲ್ಲ. ನಾನು ಕಠಿಣ ಹಾಗೂ ಶಿಸ್ತಿನ ವ್ಯಕ್ತಿ ಹೀಗಂತ ಯಾವತ್ತಿಗೂ, ಯಾರಿಗೂ ಅವಮಾನ ಮಾಡುವಂತೆ ನಡೆದುಕೊಳ್ಳುವುದಿಲ್ಲ. ಸಾಮಾನ್ಯವಾಗಿ ಯಾರಿಗಾದರೂ ಯಾವುದಾದರೂ ಕೆಲಸ ನೀಡಿದ್ದರೆ ಅದರಲ್ಲಿ ನಾನು ಕೂಡಾ ಪಾಲುದಾರನಾಗಲು ಪ್ರಯತ್ನಿಸುತ್ತೇನೆ. ನಾನು ಕಲಿಯುತ್ತೇನೆ ಹಾಗೂ ಇತರರಿಗೆ ಕಲಿಸುತ್ತೇನೆ ಹೀಗೆ ತಂಡ ರಚಿಸುತ್ತಾ ಮುಂದೆ ಸಾಗುತ್ತೇನೆ. ಅತ್ಯಂತ ಕಠಿಣ ಶಿಸ್ತು ಒಳ್ಳೆಯದಲ್ಲ. ಹೀಗಾಗಿ ಅತಿ ಹೆಚ್ಚು ಕೆಲಸ ಮಾಡಿಸುವುದಿಲ್ಲ. 

ಕೋಪ ಬಂದರೆ ಹೇಗೆ ಶಾಂತರಾಗುತ್ತೀರಿ?

ಕೋಪ ತರಿಸುವ ಘಟನೆಯಾದರೆ ಆ ಒಂದು ಪೇಪರ್ ಹಾಗೂ ಪೆನ್ನು ಹಿಡಿದು ಒಬ್ಬಂಟಿಯಾಗಿ ಕುಳಿತುಕೊಂಡು ನಡೆದ ಘಟನೆಯನ್ನು ಬರೆಯುತ್ತಿದ್ದೆ. ಘಟನೆ ಹೇಗಾಯ್ತು? ಯಾಕಾಯ್ತು ಎನ್ನುವುದನ್ನು ಬರೆಯುತ್ತಿದ್ದೆ. ಬಳಿಕ ಅದನ್ನು ಹರಿದು ಬಿಸಾಡುತ್ತಿದ್ದೆ. ಇಷ್ಟು ಮಾಡಿದರೂ ನನ್ನ ಕೋಪ ಶಾಂತಗೊಳ್ಳದಿದ್ದರೆ ಅದನ್ನೇ ಮತ್ತೆ ಮಾಡುತ್ತಿದ್ದೆ.

"

ವಿಪಕ್ಷ ನಾಯಕರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

ವಿಪಕ್ಷಗಳಲ್ಲೂ ಅತ್ಯುತ್ತಮ ಗೆಳೆಯರಿದ್ದಾರೆ. ಅವರೊಂದಿಗೆ ಉತ್ತಮ ಸಂಬಂಧವಿದೆ. ಹಳೆಯ ಘಟನೆಯೊಂದರ ಕುರಿತು ಹೆಳುವುದಾದರೆ ನಾನು ಆಗ ಸಿಎಂ ಕೂಡಾ ಆಗಿರಲಿಲ್ಲ. ಹೀಗಿರುವಾಗ ಒಂದು ದಿನ ನಾನು ಸಂಸತ್ತಿಗೆ ತೆರಳಿದ್ದೆ. ಆಗ ಗುಲಾಂ ನಬಿ ಆಝಾದ್ ಹಾಗೂ ನಾನು ಹರಟೆ ಹೊಡೆದಿದ್ದೆವು. ಆಗ ಮಾಧ್ಯಮ ಪತ್ರಕರ್ತರು ನೀವು RSS ಸದಸ್ಯ ಹೀಗಿರುವಾಗ ಗುಲಾಂ ನಬಿ ಆಜಾದ್ ಜೊತೆಗೆ ನಿಮ್ಮ ಗೆಳೆತನ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದರು. ಹೀಗಿರುವಾಗ ಗುಲಾಂ ನಬಿ ಆಜಾದ್ ಒಳ್ಳೆಯ ಉತ್ತರವೊಂದನ್ನು ನೀಡುತ್ತಾ ಇದು ಹೊರಗೆ ನೋಡಿದಂತಲ್ಲ. ಇಲ್ಲಿ ಎಲ್ಲಾ ಪಕ್ಷದ ನಾಯಕರು ಒಂದೇ ಕುಟುಂಬದಂತೆ ಇರುತ್ತೇವೆ. ನೀವದನ್ನು ಕಲ್ಪಿಸಲೂ ಸಾಧ್ಯವಿಲ್ಲ ಎಂದಿದ್ದರು.

ಮಮತಾ ದೀದಿ ಇಂದಿಗೂ ನನಗೆ ವರ್ಷಕ್ಕೆರಡು ಕುರ್ತಾ ಕಳುಹಿಸಿ ಕೊಡುತ್ತಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ವರ್ಷದಲ್ಲಿ ಮೂರ್ನಾಲ್ಕು ಬಾರಿ ವಿಶೇಷ ಸಂದರ್ಭಗಳಲ್ಲಿ ಢಾಕಾದಿಂದ ಸಿಹಿ ತಿಂಡಿ ಕಳುಹಿಸಿ ಕೊಡುತ್ತಾರೆ. ಈ ವಿಚಾರ ಮಮತಾ ದೀದಿಗೆ ತಿಳಿದರೆ ಅವರು ಕೂಡಾ ವರ್ಷಕ್ಕೆರಡು ಬಾರಿ ಸಿಹಿ ತಿಂಡಿ ಕಳುಹಿಸುತ್ತಾರೆ.

ನಿಮ್ಮ ಅಕೌಂಟ್ ನಲ್ಲಿ ಎಷ್ಟು ಹಣವಿದೆ?

ನಾನು ಗುಜರಾತ್ ಸಿಎಂ ಆಗಿದ್ದಾಗ ನನ್ನ ಬಳಿ ಬ್ಯಾಂಕ್ ಅಕೌಂಟ್ ಇರಲಿಲ್ಲ. MLA ಆಗಿದ್ದಾಗ ಸ್ಯಾಲರಿ ಬರಲಾರಂಭಿಸಿತು. ಶಾಲೆಯಲ್ಲಿದ್ದಾಗ ದೇನಾ ಬ್ಯಾಂಕ್ ಸಿಬ್ಬಂದಿ ಬಂದು ಎಲ್ಲಾ ಮಕ್ಕಳಿಗೆ ಹಣ ಸಂಗ್ರಹಿಸುವ ಹುಂಡಿ ನೀಡಿ, ಇದರಲ್ಲಿ ಹಣ ಕೂಡಿಟ್ಟು ಬ್ಯಾಂಕ್ ನಲ್ಲಿ ಜಮೆ ಮಾಡಿ ಎಂದಿದ್ದರು. ಆದರೆ ನಮ್ಮ ಬಳಿ ಹುಂಡಿಗೆ ಹಾಕಲು ಹಣವಿರಬೇಕಲ್ಲವೇ? ಅಂದಿನಿಂದ ಅಕೌಂಟ್ ನಿಷ್ಕ್ರಿಯವಾಗಿ ಬಿದ್ದಿತ್ತು. ಸರ್ಕಾರದ ಪರವಾಗಿ ಒಂದು ಫ್ಲ್ಯಾಟ್ ಸಿಗುತ್ತದೆ, ಕಡಿಮೆ ಬೆಲೆಗೆ ಸಿಗುವ ಈ ಫ್ಲ್ಯಾಟ್ ನಾನು ನನ್ನ ಪಕ್ಷಕ್ಕೆ ನೀಡಿದೆ. ಈ ಫ್ಲ್ಯಾಟ್ ವಿಚಾರವಾಗಿ ಸುಪ್ರಿಂ ಕೋರ್ಟ್ ನಲ್ಲಿ ಇನ್ನೂ ಪ್ರಕರಣ ನಡೆಯುತ್ತಿದೆ, ಅದು ಕ್ಲಿಯರ್ ಆದ ಬಳಿಕ ಫ್ಲ್ಯಾಟ್ ಪಕ್ಷದ ಹೆಸರಿಗೆ ಮಾಡುತ್ತೇನೆ.