ನವದೆಹಲಿ/ಕೋಲ್ಕತಾ :  ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ವಿಚಾರಣೆ ನಡೆಸಲು ಮುಂದಾದ ಸಿಬಿಐ ಕ್ರಮವು ಈಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ನಡುವೆ ರಾಜಕೀಯ ಹಾಗೂ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ.

ಒಂದೆಡೆ ಕುಮಾರ್‌ ವಿಚಾರಣೆಗೆ ಕೋಲ್ಕತಾ ಪೊಲೀಸರು ಅಡ್ಡಿಪಡಿಸಿದರು ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಮಂಗಳವಾರ ನಡೆಯಲಿದೆ. ಕುಮಾರ್‌ ಅವರು ಸಾಕ್ಷ್ಯ ನಾಶಕ್ಕೆ ಯತ್ನಿಸಿದರು ಎಂದು ಸೋಮವಾರದ ವಿಚಾರಣೆ ವೇಳೆ ಸಿಬಿಐ ಆರೋಪಿಸಿದ್ದು, ಇದು ನಿಜವೇ ಆದಲ್ಲಿ ಖಡಕ್‌ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಆಯುಕ್ತರಿಗೆ ಸುಪ್ರೀಂ ಕೋರ್ಟ್‌ ತೀಕ್ಷ$್ಣ ಎಚ್ಚರಿಕೆ ನೀಡಿದೆ. ಇದೇ ವೇಳೆ, ಕುಮಾರ್‌ ವಿರುದ್ಧ ಸಿಬಿಐ ಯಾವುದೇ ಕ್ರಮ ಕೈಗೊಳ್ಳದಂತೆ ತಡೆ ವಿಧಿಸಬೇಕು ಎಂದು ಮಮತಾ ಸರ್ಕಾರ ಕೂಡ ಕಲ್ಕತ್ತಾ ಹೈಕೋರ್ಟ್‌ ಮೊರೆ ಹೋಯಿತಾದರೂ ತಕ್ಷಣವೇ ಇದರ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್‌ ನಿರಾಕರಿಸಿದೆ.

ಇದಿಷ್ಟುಕಾನೂನು ಸಂಘರ್ಷವಾದರೆ ರಾಜಕೀಯ ಸಂಘರ್ಷ ಕೂಡ ತಾರಕಕ್ಕೇರಿದೆ. ಮಮತಾ ಬ್ಯಾನರ್ಜಿ ಬೆಂಬಲಕ್ಕೆ ಎನ್‌ಡಿಎಯೇತರ ಬಹುತೇಕ ಪ್ರತಿಪಕ್ಷಗಳು ಧಾವಿಸಿದ್ದು, ಕೋಲ್ಕತಾದಲ್ಲಿ ಭಾನುವಾರ ಸಂಜೆಯಿಂದ ಅವರು ಆರಂಭಿಸಿರುವ ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ಯಾವತ್ತೂ ತಟಸ್ಥ ನಿಲುವು ತಳೆಯುತ್ತಿದ್ದ ಒಡಿಶಾದ ಬಿಜೆಡಿ ಕೂಡ ಮಮತಾಗೆ ಬೆಂಬಲ ಪ್ರಕಟಿಸಿದ್ದು, ಮೋದಿ ಸರ್ಕಾರದ ವಿರುದ್ಧ ತೊಡೆತಟ್ಟಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಈ ವಿಷಯ ಪ್ರಸ್ತಾಪಿಸಿ ಗಂಟಲೇರಿಸಿವೆ. ಉಭಯ ಸದನಗಳ ಕಲಾಪ ಮುಂದೂಡಿಕೆ ಕಂಡಿದೆ.

ಈ ನಡುವೆ ಭಾನುವಾರ ರಸ್ತೆಯಲ್ಲೇ ಅಹೋರಾತ್ರಿ ಧರಣಿ ನಡೆಸಿದ ಮಮತಾ ಬ್ಯಾನರ್ಜಿ ಸೋಮವಾರವೂ ಧರಣಿ ಮುಂದುವರಿಸಿದರು. ಸ್ಥಳದಲ್ಲೇ ಕ್ಯಾಬಿನೆಟ್‌ ಸಭೆ ನಡೆಸಿ ಬಜೆಟ್‌ ಅನುಮೋದಿಸಿದರು. ಪೊಲೀಸರಿಗೆ ಗೌರವ ಪದವಿ ಪ್ರದಾನ ಕಾರ್ಯಕ್ರಮವನ್ನೂ ಧರಣಾ ಸ್ಥಳದಲ್ಲೇ ನಡೆಸಿದರು. ಪ್ರಜಾಪ್ರಭುತ್ವ ರಕ್ಷಣೆಯಾಗುವವರೆಗೂ ಧರಣಿ ಮುಂದುವರಿಸುವೆ ಎಂದು ಮಮತಾ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಬಂಗಾಳದಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಚಿಟ್‌ ಫಂಡ್‌ ಹಗರಣದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡ ಕುರಿತು ಎಲ್ಲಾ ಮಾಹಿತಿ ಇರುವ ಕೆಂಪು ಡೈರಿ ಮತ್ತು ಪೆನ್‌ ಡ್ರೈವ್‌ಗಳ ಬಗ್ಗೆ ಚಿಟ್‌ ಫಂಡ್‌ ಹಗರಣದ ರೂವಾರಿ ಬಾಯಿಬಿಟ್ಟಿದ್ದಾನೆ. ಹಗರಣದ ಕುರಿತು ಎಲ್ಲಾ ಮಾಹಿತಿ ಇರುವ ಪೊಲೀಸ್‌ ಆಯುಕ್ತರನ್ನು ರಕ್ಷಿಸಲು ಮಮತಾ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಕಿಡಿಕಾರಿದ್ದಾರೆ. ಮಮತಾ ಅವರನ್ನು ವಿವಿಧ ಪಕ್ಷಗಳು ಬೆಂಬಲಿಸುತ್ತಿರುವುದರಿಂದ ಭ್ರಷ್ಟರ ಮೈತ್ರಿಕೂಟವೊಂದು ಉದಯಿಸುತ್ತಿದೆ ಎಂದು ಮತ್ತೊಬ್ಬ ಸಚಿವ ರವಿಶಂಕರ ಪ್ರಸಾದ್‌ ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ, ಶಾರದಾ ಹಗರಣ ಟೀಕಿಸಿ ರಾಹುಲ್‌ ಗಾಂಧಿ ಈ ಹಿಂದೆ ಮಾಡಿದ್ದ ಟ್ವೀಟ್‌ಗಳನ್ನು ಕೆದಕಿರುವ ಬಿಜೆಪಿ, ರಾಹುಲ್‌ಗೆ ಸಮಸ್ಯೆ ಇದ್ದು ಚೇತರಿಸಿಕೊಳ್ಳಲಿ ಎಂದು ಕುಹಕವಾಡಿದೆ.

ಸುಪ್ರೀಂ ಎಚ್ಚರಿಕೆ:  ಕೋಲ್ಕತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದೇ ಆದಲ್ಲಿ ಅವರು ಪಶ್ಚಾತ್ತಾಪ ಪಡುವಂತೆ ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತಾದಲ್ಲಿ ಭಾನುವಾರ ರಾತ್ರಿ ನಡೆದ ಹೈಡ್ರಾಮಾದ ನಂತರ ಸೋಮವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ವಿರುದ್ಧ ಸುಪ್ರೀಂಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಸಿದರು. ಶಾರದಾ ಚಿಟ್‌ ಫಂಡ್‌ ಹಗರಣದಲ್ಲಿ ರಾಜೀವ್‌ ಕುಮಾರ್‌ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದ್ದು, ಅವರಿಗೆ ಕೂಡಲೇ ಸಿಬಿಐಗೆ ಶರಣಾಗುವಂತೆ ಸೂಚಿಸಬೇಕು ಎಂಬುದು ಒಂದು ಅರ್ಜಿಯಾದರೆ, ಚಿಟ್‌ ಫಂಡ್‌ ಹಗರಣದಲ್ಲಿ ನಾಲ್ಕು ಬಾರಿ ಸಮನ್ಸ್‌ ನೀಡಿದರೂ ವಿಚಾರಣೆಗೆ ಸಹಕರಿಸದೆ ರಾಜೀವ್‌ ಕುಮಾರ್‌ ನ್ಯಾಯಾಂಗ ನಿಂದನೆಯಲ್ಲಿ ತೊಡಗಿದ್ದಾರೆ ಎಂಬುದು ಇನ್ನೊಂದು ಅರ್ಜಿಯಾಗಿತ್ತು.

ಈ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸಲು ನ್ಯಾಯಪೀಠ ಒಪ್ಪಿಕೊಂಡು, ವಿಚಾರಣೆಯನ್ನು ಮಂಗಳವಾರ ಬೆಳಗ್ಗೆ 10.30ಕ್ಕೆ ನಿಗದಿಪಡಿಸಿತು. ಇದೇ ವೇಳೆ ಈ ಅರ್ಜಿಗಳನ್ನು ಸಿಬಿಐ ಪರವಾಗಿ ಸಲ್ಲಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ, ‘ರಾಜೀವ್‌ ಕುಮಾರ್‌ ವಿರುದ್ಧ ನಿಮ್ಮ ದೂರುಗಳೇನಿದ್ದರೂ ಎಲ್ಲವನ್ನೂ ಅಫಿಡವಿಟ್‌ ರೂಪದಲ್ಲಿ ಸಲ್ಲಿಸಿ. ಅಲ್ಲದೆ, ನಿಮ್ಮ ಆರೋಪಗಳಿಗೆ ಸಾಕ್ಷ್ಯ ಒದಗಿಸಿಲ್ಲ. ಸಾಕ್ಷ್ಯ ಕೊಡಿ’ ಎಂದು ಸೂಚಿಸಿತು. ನಂತರ ರಾಜೀವ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಪೀಠ, ‘ಕೋಲ್ಕತ್ತಾದ ಪೊಲೀಸ್‌ ಆಯುಕ್ತರು ಸಾಕ್ಷ್ಯಗಳನ್ನು ನಾಶಪಡಿಸುವ ಬಗ್ಗೆ ಯೋಚನೆ ಮಾಡಿದರೂ ಸಾಕು ನಮಗೆ ಮಾಹಿತಿ ನೀಡಿ. ಅವರ ವಿರುದ್ಧ ಎಷ್ಟುಕಠಿಣ ಕ್ರಮ ಕೈಗೊಳ್ಳುತ್ತೇವೆಂದರೆ ಅವರು ಪಶ್ಚಾತ್ತಾಪ ಪಡುತ್ತಾರೆ’ ಎಂದು ಹೇಳಿತು.

ತುಷಾರ್‌ ಮೆಹ್ತಾ ವಾದದ ನಂತರ ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದ ಮಂಡಿಸಲು ಕಾಂಗ್ರೆಸ್‌ ನಾಯಕ, ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಮುಂದಾದರು. ಆದರೆ, ಸುಪ್ರೀಂಕೋರ್ಟ್‌ ಅವರ ವಾದವನ್ನು ಆಲಿಸದೆ ಮಂಗಳವಾರ ಸಿಬಿಐ ಅರ್ಜಿಗಳ ವಿಚಾರಣೆ ನಡೆಸುವುದಾಗಿ ಆದೇಶ ಹೊರಡಿಸಿತು.

ಕಲ್ಕತ್ತಾ ಹೈಕೋರ್ಟಲ್ಲೂ ಸಂಘರ್ಷ:  ಇದೇ ವೇಳೆ, ಸಿಬಿಐ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕೂಡ ಕಲ್ಕತ್ತಾ ಹೈಕೋರ್ಟ್‌ ಕದ ತಟ್ಟಿತು. ಕುಮಾರ್‌ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ರಾಜ್ಯ ಸರ್ಕಾರ ಕೋರಿತು. ಆದಾಗ್ಯೂ, ಮುಖ್ಯಮಂತ್ರಿ ಹಾಗೂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅರ್ಜಿಯನ್ನು ತತ್‌ಕ್ಷಣವೇ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್‌ ನಿರಾಕರಿಸಿತು. ಮುಂದಿನ ವಿಚಾರಣೆಯನ್ನು ಫೆ.13ರಂದು ನಿಗದಿಪಡಿಸಲಾಗಿದೆ.