ಕೋಲ್ಕತಾ: ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರದ ಗದ್ದುಗೆಗೆ ಮರಳಿದ ಬೆನ್ನಲ್ಲೇ, ಚುನಾವಣೆಯಲ್ಲಿ ಬಳಕೆ ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆ ವಾಪಸ್ ತರುವಂತೆ ಜಂಟಿಯಾಗಿ ಹೋರಾಟ ನಡೆಸುವಂತೆ ಪ್ರತಿಪಕ್ಷಗಳಿಗೆ ಕರೆ ನೀಡಿದ್ದಾರೆ. ವಿದ್ಯುನ್ಮಾನ ಮತಯಂತ್ರಗಳ ಕುರಿತು ವಿವರ ಕಲೆ ಹಾಕಲು ಸತ್ಯಶೋಧನಾ ಸಮಿತಿ ರಚಿಸಬೇಕು ಎಂದೂ ಆಗ್ರಹಿಸಿದ್ದಾರೆ. 

ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ನಾವು ರಕ್ಷಿಸಬೇಕಿದೆ. ನಮಗೆ ಯಂತ್ರ ಗಳು ಬೇಕಿಲ್ಲ. ಮತಪತ್ರ ವ್ಯವಸ್ಥೆ ಮರಳಿ ಬರಬೇಕು. ಇದಕ್ಕಾಗಿ ಚಳವಳಿ ಆರಂಭಿಸುತ್ತೇವೆ. ಅದು ಬಂಗಾಳ ದಿಂದಲೇ ಆರಂಭವಾಗಲಿದೆ. ಅಮೆರಿಕದಂತಹ ದೇಶದಲ್ಲೂ ಇವಿಎಂಗೆ ನಿಷೇಧವಿದೆ ಎಂದು ಹೇಳಿದರು.