ನವದೆಹಲಿ: ಚಿಟ್‌ ಫಂಡ್‌ ಹಗರಣದ ಎಲ್ಲಾ ಮಾಹಿತಿ ಗೊತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಪ್ರಕಾಶ್‌ ಜಾವಡೇಕರ್‌, ಪ್ರಭಾವಿ ವ್ಯಕ್ತಿಗಳ ಹಣ ದರ್ಬಳಕೆ ಕುರಿತು ಎಲ್ಲಾ ಮಾಹಿತಿ ಇರುವ ಕೆಂಪು ಡೈರಿ ಮತ್ತು ಪೆನ್‌ ಡ್ರೈವ್‌ಗಳು ಬಗ್ಗೆ ಚಿಟ್‌ ಫಂಡ್‌ ಹಗರಣದ ರೂವಾರಿ ಬಾಯಿಬಿಟ್ಟಿದಾನೆ. 

ಹಗರಣದ ಕುರಿತು ಎಲ್ಲಾ ಮಾಹಿತಿ ಇರುವ ವ್ಯಕ್ತಿಯನ್ನು ರಕ್ಷಿಸಲು ಮಮತಾ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಸಿಬಿಐ ಕೇವಲ ವಿಚಾರಣೆ ನಡೆಸಲು ಬಯಸಿದ ಮಾತ್ರಕ್ಕೆ ಮಮತಾ ಬ್ಯಾನರ್ಜಿ ಅವರು ಪ್ರತಿಭಟನೆ ನಡೆಸಲು ಮುಂದಾಗಿರುವುದು ತೀರಾ ವಿಚಿತ್ರ. ಮುಖ್ಯಮಂತ್ರಿ ಆದವರೇ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲು. ಮಮತಾ ಅವರ ಈ ಕ್ರಮ ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದರು. ಇದೇ ವೇಳೆ, ಮಮತಾ ಬ್ಯಾನರ್ಜಿ ಅವರಿಗೆ ವಿವಿಧ ನಾಯಕರು ಬೆಂಬಬಲ ನೀಡುತ್ತಿರುವುದರಿಂದ ಭ್ರಷ್ಟರ ಮೈತ್ರಿಕೂಟವೊಂದು ಉದಯಿಸುತ್ತಿರುವಂತಿದೆ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಕಿಡಿಕಾರಿದ್ದಾರೆ. ಪೊಲೀಸ್‌ ಆಯುಕ್ತರ ಬಳಿಕ ರಹಸ್ಯ ಮಾಹಿತಿ ಇರುವುದರಿಂದಲೇ ಅವರನ್ನು ಬ್ಯಾನರ್ಜಿ ರಕ್ಷಿಸುತ್ತಿದ್ದಾರೆಯೇ ಎಂದು ಕೇಳಿದ್ದಾರೆ.

ಕುನಾಲ್‌ ಘೋಷ್‌, ಸಂಜಯ್‌ ಬೋಸ್‌, ಸುದೀಪ್‌ ಬಂಡೋಪಾಧ್ಯಾಯ, ತಪಸ್‌ ಪಾಲ್‌ ಮತ್ತು ಮದನ್‌ ಮಿತ್ರಾ ಅವರ ಹೆಸರನ್ನು ಉಲ್ಲೇಖಿಸಿ, ಮಮತಾ ಬ್ಯಾನರ್ಜಿ ಅವರ ಪಕ್ಷದ ಸಂಸದರು ಮತ್ತು ಶಾಸಕರು ಚಿಟ್‌ ಫಂಡ್‌ ಹಗರಣದಲ್ಲಿ ಬಂಧಿತರಾಗಿದ್ದಾರೆ. ಹಾಗಿದ್ದರೆ ಮಮತಾ ಯಾರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಯಾಕೆ ಅವರು ಧರಣಿ ಕುಳಿತಿದ್ದಾರೆ? ಅವರು ಪೊಲೀಸ್‌ ಆಯುಕ್ತರನ್ನು ರಕ್ಷಿಸುತ್ತಿದ್ದಾರೋ ಅಥವಾ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೋ? ಏನನ್ನು ಅವರು ಮುಚ್ಚಿಡಲು ಯತ್ನಿಸುತ್ತಿದ್ದಾರೆ? ಎಂದು ಜಾವಡೇಕರ್‌ ಪ್ರಶ್ನಿಸಿದರು.

ಮಮತಾರಿಂದ ತುರ್ತು ಪರಿಸ್ಥಿತಿ:  ಇದೇ ವೇಳೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಸನ್ನಿವೇಶ ಸೃಷ್ಟಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಜಾವಡೇಕರ್‌, ಇದು ನರೇಂದ್ರ ಮೋದಿ ಅವರು ಹೇರಿದ ತುರ್ತು ಪರಿಸ್ಥಿತಿ ಅಲ್ಲ. ಬದಲಾಗಿ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಹೇರಿರುವ ತುರ್ತು ಪರಿಸ್ಥಿತಿ. ನಾವು ಬಂಗಾಳದಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲಿದ್ದೇವೆ. ಇಂದಿರಾ ಗಾಂಧಿ ಅವರು ಕೂಡ ತುರ್ತು ಪರಿಸ್ಥಿತಿ ಹೇರಿದ್ದರು. ನಾವು ಅದರ ವಿರುದ್ಧ ಹೋರಾಡಿ ಅವರನ್ನು ಸೋಲಿಸಿದ್ದೆವು. ನಾವು ಟಿಎಂಸಿಯನ್ನು ಕೂಡ ಸೋಲಿಸಲಿದ್ದೇವೆ ಎಂದು ಹೇಳಿದರು.