ಕೋಲ್ಕತಾ/ನವದೆಹಲಿ [ಜೂ.29] : ಶೇ.70 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಮುಸ್ಲಿಂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಬಡಿಸಲು ಪ್ರತ್ಯೇಕವಾದ ಭೋಜನಾಲಯ ನಿರ್ಮಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಸುತ್ತೋಲೆ ಹೊರಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳ ಸರ್ಕಾರ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ ಎಂದು ಬಿಜೆಪಿ ನಿರಂತರವಾಗಿ ಆರೋಪ ಮಾಡಿಕೊಂಡು ಬಂದಿರುವಾಗಲೇ ಹೊರಬಿದ್ದಿರುವ ಈ ಸುತ್ತೋಲೆ ಮತ್ತಷ್ಟುವಾಕ್ಸಮರಕ್ಕೆ ಕಾರಣವಾಗಿದೆ. ಕೂಚ್‌ಬೆಹಾರ್‌ ಜಿಲ್ಲೆಯಲ್ಲಿ ಹೊರಡಿಸಲಾಗಿರುವ ಸರ್ಕಾರಿ ಸುತ್ತೋಲೆಯನ್ನು ಟ್ವೀಟ್‌ ಮಾಡಿರುವ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌, ಧರ್ಮದ ಆಧಾರದಲ್ಲಿ ಮಕ್ಕಳಲ್ಲಿ ಈ ರೀತಿಯ ತಾರತಮ್ಯ ಏಕೆ? ಈ ರೀತಿ ಮಕ್ಕಳನ್ನು ಪ್ರತ್ಯೇಕಿಸುವುದರ ಹಿಂದೆ ದುರುದ್ದೇಶವೇನಾದರೂ ಇದೆಯೇ? ಮತ್ತೊಂದು ಸಂಚಾ ಇದು? ಎಂದು ಪ್ರಶ್ನಿಸಿದ್ದಾರೆ.

ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುತ್ತೋಲೆಯಲ್ಲಿ ಬಳಸಿರುವ ಕೆಲ ಪದಗಳಿಂದಾಗಿ ಇಂಥ ವಿವಾದ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ನಿಧಿ ಬಳಸಿಕೊಳ್ಳಲು ಇರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಇಂಥ ಆದೇಶ ಹೊರಡಿಸಲಾಗಿದೆ. ಮುಸ್ಲಿಂ ಮಕ್ಕಳೇ ಹೆಚ್ಚಾಗಿರುವ ಶಾಲೆಗಳಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ಹಣ ಪಡೆಯಲು ಅವಕಾಶವಿದೆ. ಹೀಗಾಗಿ ಇಂಥ ಆದೇಶ ಹೊರಡಿಸಲಾಗಿದೆ. ಪ್ರತ್ಯೇಕ ಭೋಜನಾಲಯವನ್ನು ಎಲ್ಲಾ ಶಾಲೆಗಳಲ್ಲೂ ನಿರ್ಮಿಸಲು ಉದ್ದೇಶಿಸಲಾಗಿದೆ. ಮುಸ್ಲಿಂ ಮಕ್ಕಳು ಹೆಚ್ಚಿರುವ ಶಾಲೆಗಳೀಗೆ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹಕ್ಕಾಗಿ ಮಾತ್ರವೇ ಇಂಥ ಆದೇಶ ಹೊರಡಿಸಲಾಗಿದೆಯೇ ವಿನಃ, ಇದರಲ್ಲಿ ಧರ್ಮಧ ಹೆಸರಲ್ಲಿ ಮಕ್ಕಳನ್ನು ವಿಭಜಿಸುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.