ಮುಗ್ದ ರೈತರು ತಮಗೆ ತಿಳಿಯದಂತೆಯೇ ಕಾನೂನಿನ ಕುಣಿಕೆಗೆ ಬೀಳುತ್ತಿದ್ದಾರೆ. ಅರಿವಿಲ್ಲದೇ ಅಪರಾದ ಎನ್ನುವುದೂ ಕೂಡ ತಿಳಿಯದೇ ಗಾಂಜಾ ಬೆಳೆದು ಅಪರಾಧ ಎಸಗುತ್ತಿದ್ದಾರೆ. 

ಬೆಂಗಳೂರು : ‘ಎಲ್ಲ ಬಿಟ್ಟು ಮಗ ಭಂಗಿ ನೆಟ್ಟ’ ಎಂಬ ಗಾದೆ ಮಾತೊಂದು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಇದು ಅಕ್ಷರಶಃ ಮಲೆನಾಡಿನ ಮುಗ್ಧ ರೈತರಿಗೆ ಅನ್ವಯಿಸುತ್ತಿದೆ. ಸರಿಯಾದ ಅರಿವು, ತಿಳಿವಳಿಕೆ ಇಲ್ಲದೆ ಮಲೆನಾಡಿನ ಕೃಷಿ ಚಟುವಟಿಕೆಯಲ್ಲಿ ಒಂದು ಭಾಗವಾಗಿ ಹೋಗಿರುವ ಗಾಂಜಾ ಬೆಳೆಯಿಂದ ರೈತರು ಕಾನೂನಿನ ಬಿಗಿ ಕುಣಿಕೆಗೆ ಗೊತ್ತಿಲ್ಲದೆ ಬೀಳುತ್ತಿದ್ದಾರೆ. ಯಾರೋ ತೋರಿಸುವ ಹಣದಾಸೆಗೆ ತಮ್ಮ ಕುಟುಂಬ ಜೀವನವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ.

ಅಡಕೆ, ಜೋಳ, ಶುಂಠಿ ಬೆಳೆದು ಹೇಗೋ ಬದುಕು ಕಟ್ಟಿಕೊಳ್ಳುತ್ತಿದ್ದ ರೈತರ ಹೊಲದಲ್ಲೀಗ ಗಾಂಜಾ ಬೆಳೆಯ ಘಮಲು ಹರಡುತ್ತಿದೆ. ಅಡಕೆ, ಭತ್ತ, ಶ್ರೀಗಂಧ, ಶುಂಠಿ ಬೆಳೆಗೆ ಹೆಸರು ವಾಸಿಯಾಗಿದ್ದ ಸುಸಂಸ್ಕೃತ ಜಿಲ್ಲೆ ಶಿವಮೊಗ್ಗ ಇದೀಗ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಗಾಂಜಾ ಬೆಳೆಯುವ ಪ್ರದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿರುವುದು ದುರಂತದ ಸಂಗತಿ.

ಶಿವಮೊಗ್ಗ, ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಈ ಬೆಳೆಯನ್ನು ವ್ಯವಸ್ಥಿತವಾಗಿ ಬೆಳೆಯಲಾಗುತ್ತಿದೆ. ಮುಖ್ಯ ರಸ್ತೆಯಿಂದ ಒಳಗೆ ಇರುವ ಜಮೀನುಗಳಲ್ಲಿ ಮೆಕ್ಕೆಜೋಳ, ಅಡಕೆ ತೋಟದಲ್ಲಿ, ಶುಂಠಿ ಬೆಳೆ ನಡುವೆ ಈ ಗಾಂಜಾ ಬೆಳೆಯನ್ನು ವ್ಯವಸ್ಥಿತವಾಗಿ ಬೆಳೆಸುವ ಕೆಲಸವನ್ನು ಡ್ರಗ್ಸ್ ಮಾಫಿಯಾ ಮಾಡುತ್ತಿದೆ. ಖಾತೆ ಜಮೀನಿಗಿಂತ ಮುಖ್ಯವಾಗಿ ಬಗರ್‌ಹುಕುಂ ಭೂಮಿಯಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತಿದೆ. 

ಇದಕ್ಕೆ ಮಂಗಳೂರು, ಮುಂಬೈಗಳು ಮಾರುಕಟ್ಟೆಯಾಗಿವೆ. ಯಾವ ಬೆಳೆ ಬೆಳೆದರೂ ನಷ್ಟ ಮಾತ್ರ ಎಂದು ಸಂಕಟ ಪಡುತ್ತಿರುವ ರೈತರನ್ನು ಹಣದ ಮೋಹಕ್ಕೆ ಕೆಡವಿ ಡ್ರಗ್ಸ್ ಮಾಫಿಯಾ ಈ ಬೆಳೆಯತ್ತ ವಾಲುವಂತೆ ಮಾಡುತ್ತದೆ. ಆದರೆ ಬಹುತೇಕ ರೈತರಿಗೆ ಇದರಿಂದ ಎದುರಾಗಬಹುದಾದ ಅಪಾಯಗಳ ಅರಿವೇ ಇರುವುದಿಲ್ಲ. ಮುಂದಿನ ತಮ್ಮ ಬದುಕು ನಾಶವಾಗುವ ಕುರಿತು ಗೊತ್ತೇ ಇರುವುದಿಲ್ಲ. ತಾವು ಶಾಶ್ವತವಾಗಿ ಜೈಲಿನಲ್ಲಿ ಇದ್ದು, ತಮ್ಮ ಹೆಂಡತಿ, ಮಕ್ಕಳು ಉಪವಾಸ ಇರಬೇಕಾಗುತ್ತದೆ ಎಂಬುದೂ ತಿಳಿದಿರುವುದಿಲ್ಲ.

ಮಲೆನಾಡು ಭಾಗದಲ್ಲಿ ಡ್ರಗ್ಸ್ ಮಾಫಿಯಾದ ಏಜೆಂಟರು ಇದ್ದಾರೆ ಎಂಬ ಸುದ್ದಿ ಇದೆಯಾದರೂ, ಈ ಬಗ್ಗೆ ಇಲಾಖೆ ತನಗೆ ಗೊತ್ತಿಲ್ಲ ಎನ್ನುತ್ತದೆ. ಇವರನ್ನು ಪತ್ತೆ ಹಚ್ಚಲು ಇದೀಗ ಸ್ವಲ್ಪ ಗಂಭೀರ ಯತ್ನ ನಡೆಯುತ್ತಿದೆ. ಇಂತಹ ಏಜೆಂಟರು ಸದ್ದುಗದ್ದಲವಿಲ್ಲದೆ ಊರೂರು ತಿರುಗಿ ಆಯ್ದ ರೈತರನ್ನು ಸಂಪರ್ಕಿಸಿ ಅವರಿಗೆ ಗಾಂಜಾ ಬೆಳೆ ಕುರಿತು ಮಾಹಿತಿ ನೀಡುತ್ತಾರೆ. 

ಕೆಲವೇ ಕೆಲವು ಗಿಡ ಬೆಳೆಯಿರಿ, ಸಾವಿರಾರು ರುಪಾಯಿ ಗಳಿಸಿರಿ ಎಂಬ ಆಮಿಷವೊಡ್ಡಿ ದಾರಿ ತಪ್ಪಿಸುತ್ತಾರೆ. ಇದಕ್ಕಾಗಿ ಹಣ ಖರ್ಚು ಮಾಡುವುದು ಬೇಡ, ನಾವೇ ಬೀಜ ನೀಡುತ್ತೇವೆ. ಬಳಿಕ ಬೆಳೆದ ಗಿಡವನ್ನೂ ಖರೀದಿಸುತ್ತೇವೆ ಎನ್ನುತ್ತಾರೆ. ಈ ಮಾತಿಗೆ ಮರುಳಾಗಿ ಮುಗ್ಧ ರೈತರು ಇದನ್ನು ಬೆಳೆಯುತ್ತಾರೆ. ಕಾಡಂಚಿನಲ್ಲಿ ಇರುವ ರೈತರನ್ನೇ ಇವರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಆದರೆ, ಈ ಬೆಳೆ ಬೆಳೆದು ಫಸಲು ಕೈಗೆ ಸಿಗಬೇಕಾದರೆ ಕೆಲ ತಿಂಗಳು ಬೇಕು. ಅಲ್ಲಿಯವರೆಗೆ ಇದನ್ನು ಗುಪ್ತವಾಗಿ ಕಾಯಬೇಕು. ಈ ಬೆಳೆ ಬೆಳೆ ಯುವುದು ಅಪರಾಧ ಎನ್ನುವುದು ರೈತರಿಗೆ ಗೊತ್ತಿಲ್ಲ. ಇದು ನಿಷೇಧಿತ ಬೆಳೆ ಎಂಬುದೂ ತಿಳಿದಿರುವುದಿಲ್ಲ. ಸುಲಭವಾಗಿ ಹಣ ಗಳಿಸುವ ಆಸೆಯಿಂದ ಒಪ್ಪಿಕೊಂಡು ಬೆಳೆ ಬೆಳೆಯುತ್ತಾರೆ. ಇದರಿಂದ ಯಾರು ಎಷ್ಟು ಹಣ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಅನೇಕ ರೈತರು ಮಾತ್ರ ಇತ್ತ ಆಕರ್ಷಿತರಾಗುತ್ತಲೇ ಇದ್ದಾರೆ. ಇದರಿಂದ ಬಹಳಷ್ಟು ಜನ ದುಡ್ಡು ಮಾಡಿಕೊಂಡರು ಎಂದು ವದಂತಿ ಮಾತ್ರ ಹರಡಲಾಗುತ್ತಿದೆ.

100 ಗಿಡಗಳಿಂದ ಹಿಡಿದು ಸಾವಿರಾರು ಗಿಡಗಳನ್ನು ತಮ್ಮ ಜಮೀನಿನಲ್ಲಿ ರೈತರು ಬೆಳೆದ ಉದಾಹರಣೆಗಳಿವೆ. ಇಷ್ಟೊಂದು ಗಿಡಗಳನ್ನು ರೈತರು ಮಾರಾಟ ಮಾಡಲೇಬೇಕು. ಅದಕ್ಕೊಂದು ವ್ಯವಸ್ಥಿತ ಜಾಲ ಇರಲೇಬೇಕು ಎಂಬುದು ಸಾಮಾನ್ಯ ಜ್ಞಾನ. ಇದರ ಖರೀದಿಗೆ ವ್ಯವಸ್ಥಿತ ಜಾಲ ಇದೆ ಎಂಬುದು ಗೊತ್ತಿದ್ದರೂ ಪತ್ತೆಯಾಗುತ್ತಿಲ್ಲ. ಈ ರೀತಿ ಬೆಳೆ ಬೆಳೆಯುತ್ತಿರುವಂತೆಯೇ ಕೆಲವೊಮ್ಮೆ ಇದು ಅಬಕಾರಿ ಇಲಾಖೆಗೆ ಗೊತ್ತಾಗುತ್ತದೆ. 

ಯಾರಾದರೂ ಮಾಹಿತಿ ನೀಡುತ್ತಾರೆ. ಅವರು ದಾಳಿ ಮಾಡಿ ಗಾಂಜಾ ಬೆಳೆಯ ಜೊತೆಗೆ ರೈತರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಆಗ ರೈತರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಹೆಂಡತಿ, ಮಕ್ಕಳು ಅನಾಥರಾಗುತ್ತಿದ್ದಾರೆ ಎಂದು ಅರ್ಥವಾಗುತ್ತದೆ. ಅಷ್ಟರಲ್ಲಿ ಕಾಲ ಮಿಂಚಿರುತ್ತದೆ.