ಕೊಚ್ಚಿ: ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಇದೀಗ ಎಲ್ಲೆಡೆಯಿಂದ ಉದಾರವಾದ ನೆರವು ಹರಿದು ಬರುತ್ತಿದೆ. ಕೇರಳ ಮೂಲದ ಎನ್ ಆರ್ ಐ  ಬಿಲಿಯನೇರ್ ಓರ್ವರು ತಮ್ಮ ತವರಿಗಾಗಿ 50 ಕೋಟಿ ನೆರವು ನೀಡಿ ಸುದ್ದಿಯಾಗಿದ್ದಾರೆ.

ಎನ್ ಆರ್ ಐ  ಬಿಲಿಯನೇರ್ ಅಬುದಾಬಿಯ ವಿಪಿಎಸ್ ಹೆಲ್ತ್ ಕೇರ್ ಮುಖ್ಯಸ್ಥ ಡಾ. ಶಂಶೀರ್ ವಯಲಿಲ್  ಅವರು ಕೇರಳಕ್ಕೆ 50 ಕೋಟಿ ಹಣವನ್ನು ದಾನವಾಗಿ ನೀಡಿದ್ದಾರೆ. 

ಇದುವರೆಗೂ ವೈಯಕ್ತಿಕವಾಗಿ ದಾನವಾಗಿ  ನೀಡಿದ ಅತ್ಯಧಿಕ ಪ್ರಮಾಣದ ಹಣ ಇದಾಗಿದೆ.  ಪ್ರಮುಖವಾಗಿ ಕೇರಳದ ಜನರು ಎದುರಿಸುತ್ತಿರುವ ನೆಲೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗಾಗಿ ಈ ಪ್ರಮಾಣದಲ್ಲಿ ನೆರವು ನೀಡಿದ್ದಾರೆ. 

ಕೇರಳ ಸದ್ಯ ಅತ್ಯಂತ ಹೀನಾಯವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದೊಂದು ತಿಂಗಳಿಂದಲೂ ಕೂಡ ಕೇರಳದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಇದೆ. 

ನೈಸರ್ಗಿಕ ವಿಕೋಪದ ವಿರುದ್ಧ ಹೋರಾಡಲು ಕೇರಳಿಗರು ಹರಸಾಹಸವನ್ನೇ ಪಡುತ್ತಿದ್ದಾರೆ.  ಇಂತಹ ಸಂದರ್ಭದಲ್ಲಿ ಅವರೊಂದಿಗೆ ನಿಂತು ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ವಯಲಿಲ್ ಹೇಳಿದ್ದಾರೆ. 

ಅಲ್ಲದೇ ರಾಜ್ಯದಾದ್ಯಂತ ಪ್ರವಾಹದಲ್ಲಿ ಸಿಲುಕಿದವರಿಗೆ ನೆರವು ನೀಡುವ ಉದ್ದೇಶದಿಂದ  50 ಕೋಟಿ ಹಣದ ನೆರವು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.