ಮುಂಬೈ(ಜು.28): ಸಚಿವೆ ಪಂಕಜಾ ಮುಂಡೆ ಅವರನ್ನು ಕೇವಲ ಒಂದು ಗಂಟೆಯವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಶಿವಸೇನೆ ಸಿಎಂ ದೇವೇಂದ್ರ ಫಡ್ನವೀಸ್‌ಗೆ ತಿರುಗೇಟು ನೀಡಿದೆ.

ಮರಾಠಾ ಮೀಸಲಾತಿ ಮಸೂದೆಗೆ ಅನುಮೋದನೆ ದೊರೆಯುವಂತೆ ಮಾಡಲು, ಫಡ್ನವೀಸ್ ಸಹೋದ್ಯೋಗಿ ಪಂಕಜಾ ಮುಂಡೆ ಅವರನ್ನು ಒಂದು ಗಂಟೆ ಮಟ್ಟಿಗೆ ಸಿಎಂ ಮಾಡಬೇಕು ಎಂದು ಶಿವಸೇನೆ ವ್ಯಂಗ್ಯವಾಡಿದೆ.

ಮರಾಠಾ ಮೀಸಲಾತಿ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಡೆ, ಒಂದು ವೇಳೆ ತಾವು ಸಿಎಂ ಆಗಿದ್ದರೆ ಮರಾಠಾ ಮೀಸಲಾತಿ ಬಗ್ಗೆ ಕೇವಲ ಒಂದು ಗಂಟೆಯಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದುದಾಗಿ ಹೇಳಿಕೆ ನೀಡಿದ್ದರು. ‘ಮರಾಠಾ ಮೀಸಲಾತಿ ಕಡತ ನನ್ನ ಟೇಬಲ್ ಮೇಲೆ ಇದ್ದಿದ್ದರೆ ನಾನು ಒಂದು ಕ್ಷಣವೂ ತಡಮಾಡದೇ ನಿರ್ಧಾರ ಕೈಗೊಳ್ಳುತ್ತಿದ್ದೆ’ ಎಂದು ಪಂಕಜಾ ಹೇಳಿದ್ದರು.

ಪಂಕಜಾ ಮುಂಡೆ ಹೇಳಿಕೆಗೆ ವ್ಯಂಗ್ಯವಾಡಿರುವ ಶಿವಸೇನೆ, ಫಡ್ನವೀಸ್ ತಡ ಮಾಡದೇ  ಪಂಕಜಾ ಅವರಿಗೆ ಕನಿಷ್ಟ ಒಂದು ಗಂಟೆವರೆಗೆ ಸಿಎಂ ಖುರ್ಚಿ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿದೆ.