ಬೆಂಗಳೂರು (ಸೆ.27): ರಾಜಧಾನಿ ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿಯಲ್ಲಿ ಎರಡನೇ ಅವಧಿಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್, ಜೆಡಿಎಸ್‌ನ ಹಿರಿಯ ನಾಯಕರು ಮಾತುಕತೆ ನಡೆಸಿದ್ದು, ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಉಪಮೇಯರ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಬಿಜೆಪಿಯು ಎರಡೂ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಚುನಾವಣೆ ನಿಗದಿಯಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಜಿ.ಪದ್ಮಾವತಿ ಹಾಗೂ ಪಿ.ಸೌಮ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕರು ಅಂತಿಮಗೊಳಿಸಲಿದ್ದಾರೆ.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಲಕ್ಷ್ಮೀ ಉಮೇಶ್ ಕಬ್ಬಾಳ್ಕರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಗುರುಮೂರ್ತಿ ರೆಡ್ಡಿ ಅವರು ಸ್ಪರ್ಧಿಸಲಿದ್ದಾರೆ. ಪಾಲಿಕೆಯ 197 ಸದಸ್ಯರು ಮಾತ್ರವಲ್ಲದೆ 72 ಪಾಲಿಕೆಯೇತರ ಜನಪ್ರತಿನಿಧಿಗಳು ಮತದಾನದ ಹಕ್ಕು ಹೊಂದಿದ್ದು ತೀವ್ರ ಕುತೂಹಲ ಮೂಡಿಸಿದೆ.
