ಶ್ರೀನಗರ(ಸೆ.19): ಕಾಶ್ಮೀರದಲ್ಲಿ ಯೋಧರತ್ತ ಕಲ್ಲು ತೂರುತ್ತಿದ್ದ ವ್ಯಕ್ತಿಯನ್ನು ಜೀಪಿನ ಬ್ಯಾನೆಟ್‌ಗೆ ಕಟ್ಟಿಮಾನವ ತಡೆಗೋಡೆ ಮಾಡಿಕೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದ ಮೇಜರ್‌ ಲೀತುಲ್‌ ಗೊಗೊಯ್‌ ಅವರನ್ನು ಮಹಿಳೆ ಜತೆಗಿನ ಆಪ್ತತೆ ಪ್ರಕರಣದ ಹಿನ್ನೆಲೆಯಲ್ಲಿ ಮತ್ತೊಂದು ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ನಿಷ್ಣಾತವಾಗಿರುವ 53 ರಾಷ್ಟ್ರೀಯ ರೈಫಲ್ಸ್‌ನ ಬದ್ಗಾಂವ್‌ ಘಟಕದಿಂದ ಆವಂತಿಪುರ ಮೂಲದ ವಿಕ್ಟರ್‌ ಫೋರ್ಸ್‌ಗೆ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಲೀತುಲ್‌ ಗೊಗೊಯ್‌ ಅವರು ಕಳೆದ ಮೇ 23ರಂದು ಶ್ರೀನಗರದ ಹೋಟೆಲೊಂದಕ್ಕೆ 18 ವರ್ಷದ ಯುವತಿ ಜತೆ ಪ್ರವೇಶಿಸುತ್ತಿದ್ದಾಗ ಘರ್ಷಣೆ ನಡೆದಿತ್ತು. ತಮ್ಮ ಕಾರ್ಯನಿರ್ವಹಣಾ ವ್ಯಾಪ್ತಿಯಿಂದ ಹೊರಗೆ ಹೋಗುವ ಮೂಲಕ ಸೇನಾ ನಿಯಮ ಉಲ್ಲಂಘಿಸಿದ್ದು ಸೇರಿದಂತೆ ಎರಡು ಕಾರಣಗಳಿಗೆ ಅವರು ದೋಷಿ ಎಂದು ಕೋರ್ಟ್‌ ಆಫ್‌ ಎನ್‌ಕ್ವಯರಿ ಹೇಳಿತ್ತು. ಇದೀಗ ಆರೋಪ ಪಟ್ಟಿಹೊರಿಸುವ ಪ್ರಕ್ರಿಯೆ (ಸಮ್ಮರಿ ಆಫ್‌ ಎವಿಡೆನ್ಸ್‌) ನಡೆಯಲಿರುವ ಹಿನ್ನೆಲೆಯಲ್ಲಿ ಅವರನ್ನು ಸ್ಥಳಾಂತರ ಮಾಡಲಾಗಿದೆ.

ಮೂರು ತಿಂಗಳ ಕಾಲ ಸಮ್ಮರಿ ಆಫ್‌ ಎವಿಡೆನ್ಸ್‌ ಪ್ರಕ್ರಿಯೆ ನಡೆಯಲಿದ್ದು, ಆ ನಂತರ ಗೊಗೊಯ್‌ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಿರ್ಧಾರವಾಗಲಿದೆ.