ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈತ್ರಿಯಾ ಗೌಡ ಅವರು ಸುಪ್ರೀಂಕೋರ್ಟ್'ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಬೆಂಗಳೂರು(ಡಿ. 16): ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡಗೆ ಬಿಗ್ ರಿಲೀಫ್ ಸಿಕ್ಕಿದೆ. ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ದಾಖಲಿಸಿದ್ದ ವಂಚನೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇಂದು ತೀರ್ಪು ಹೊರಡಿಸಿದ ಉಚ್ಚ ನ್ಯಾಯಾಲಯ, ಕಾರ್ತಿಕ್ ಗೌಡ ವಿರುದ್ಧ ಸಿಐಡಿ ದಾಖಲಿಸಿದ್ದ ಚಾರ್ಜ್'ಶೀಟನ್ನು ರದ್ದುಗೊಳಿಸಿತು. ಮೈತ್ರಿಯಾ ಗೌಡ ಆರೋಪಕ್ಕೆ ಪೂರಕವಾಗಿ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ.
ಮದುವೆಯಾಗುವುದಾಗಿ ನಂಬಿಸಿ ತನ್ನನ್ನು ದೈಹಿಕವಾಗಿ ಬಳಸಿಕೊಂಡರು, ಹಾಗೂ ಅತ್ಯಾಚಾರ ಎಸಗಿದರು ಎಂದು ಕಾರ್ತಿಕ್ ಗೌಡ ವಿರುದ್ಧ ಮೈತ್ರಿಯಾ ಗೌಡ ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಕಾರ್ತಿಕ್ ಗೌಡ ವಿರುದ್ಧ ಕೋರ್ಟ್'ನಲ್ಲಿ ಆರೋಪಪಟ್ಟಿ ದಾಖಲಿಸಿದ್ದರು.
ಸುಪ್ರೀಂನಲ್ಲಿ ಮೈತ್ರಿಯಾ ಮೇಲ್ಮನವಿ:
ಇದೇ ವೇಳೆ, ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈತ್ರಿಯಾ ಗೌಡ ಅವರು ಸುಪ್ರೀಂಕೋರ್ಟ್'ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

