Asianet Suvarna News Asianet Suvarna News

ಗಾಂಧೀಜಿ ಬುದ್ಧಿವಂತ ಬನಿಯಾ ಎಂದ ಅಮಿತ್ ಶಾ: ಭಾರೀ ವಿವಾದ

ಕಾಂಗ್ರೆಸ್‌ ಪಕ್ಷದ ಇತಿಹಾಸವನ್ನು ಟೀಕಿಸುವ ಭರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ‘ಚತುರ ಬನಿಯಾ' (ಬನಿಯಾ ಎಂಬುದು ವ್ಯಾಪಾರ ವೃತ್ತಿಯಲ್ಲಿ ತೊಡಗಿರುವ ಉತ್ತರ ಭಾರತದ ಒಂದು ಸಮುದಾಯ) ಎಂದು ಸಂಬೋಧಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

Mahatma Gandhis Grandsons Bristle At Amit Shahs Chatur Baniya Remark

ರಾಯಪುರ(ಜೂ.11): ಕಾಂಗ್ರೆಸ್‌ ಪಕ್ಷದ ಇತಿಹಾಸವನ್ನು ಟೀಕಿಸುವ ಭರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ‘ಚತುರ ಬನಿಯಾ' (ಬನಿಯಾ ಎಂಬುದು ವ್ಯಾಪಾರ ವೃತ್ತಿಯಲ್ಲಿ ತೊಡಗಿರುವ ಉತ್ತರ ಭಾರತದ ಒಂದು ಸಮುದಾಯ) ಎಂದು ಸಂಬೋಧಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಗಾಂಧೀಜಿ ಅವರನ್ನು ಅವರ ಜಾತಿ ಹೆಸರಿನಿಂದ ಗುರುತಿಸಿರುವ ಶಾ ಅವರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಕ್ಷಮೆ ಕೇಳಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಒತ್ತಾಯಿಸಿದ್ದಾರೆ.

ಆದರೆ ಕ್ಷಮೆಯಾಚನೆಗೆ ಶಾ ನಿರಾ ಕರಿಸಿದ್ದು, ‘ಕಾಂಗ್ರೆಸ್‌ ದುರುಪಯೋಗ ಮಾಡಿಕೊಂಡ ಕಾಂಗ್ರೆಸ್ಸಿಗರೇ ಗಾಂಧೀಜಿಯಲ್ಲಿ ಕ್ಷಮೆ ಕೇಳಬೇಕು' ಎಂದಿದ್ದಾರೆ.

ಶಾ ಹೇಳಿದ್ದೇನು?: 2019ರ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟಿಸಲು ರಾಷ್ಟ್ರ ಪ್ರವಾಸ ಮಾಡುತ್ತಿರುವ ಅಮಿತ್‌ ಶಾ ಶುಕ್ರವಾರ ಸಂಜೆ ಛತ್ತೀಸ್‌ಗಢದ ರಾಜಧಾನಿ ರಾಯಪುರದಲ್ಲಿ ಆಯ್ದ ಗಣ್ಯವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡಿದರು. ‘ಕಾಂಗ್ರೆಸ್‌ ಪಕ್ಷ ಎಂಬುದು ಬ್ರಿಟಿಷ್‌ ವ್ಯಕ್ತಿಯೊಬ್ಬ ಸ್ಥಾಪಿಸಿದ ಕ್ಲಬ್‌. ಸ್ವಾತಂತ್ರ್ಯ ಹೋರಾಟಕ್ಕಾಗಿ ಅದನ್ನು ಒಂದು ಸಂಘಟನೆಯನ್ನಾಗಿ ಬಳಿಕ ಪರಿವರ್ತಿಸಲಾಗಿತ್ತು. ಅದರಲ್ಲಿ ಮೌಲಾನಾ ಆಜಾದ್‌, ಪಂಡಿತ್‌ ಮದನ್‌ ಮೋಹನ ಮಾಳವೀಯರಂತಹ ಬಲ ಹಾಗೂ ಎಡಪಂಥೀಯ ನಾಯಕರೆಲ್ಲಾ ಇದ್ದರು. ಹೀಗಾಗಿ ಕಾಂಗ್ರೆಸ್ಸಿಗೆ ಸಿದ್ಧಾಂತವಾಗಲೀ, ತತ್ವಾದರ್ಶಗಳಾಗಲೀ ಇರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ವಿಶೇಷ ಉದ್ದೇಶದ ವಾಹಕದಂತೆ ಅದನ್ನು ಬಳಸಿಕೊಳ್ಳಲಾಗಿತ್ತು. ಬಹಳ ದೂರದೃಷ್ಟಿಹೊಂದಿದ್ದ, ಬುದ್ಧಿವಂತ ಬನಿಯಾ ಆಗಿದ್ದ ಗಾಂಧಿ ಅವರಿಗೆ ಮುಂದೆ ಏನಾಗುತ್ತದೆ ಎಂಬುದು ಗೊತ್ತಿತ್ತು. ಹೀಗಾಗಿಯೇ ಸ್ವಾತಂತ್ರ್ಯ ಸಿಕ್ಕ ಕೂಡಲೇ ಕಾಂಗ್ರೆಸ್ಸನ್ನು ವಿಸರ್ಜಿಸಬೇಕು ಎಂದು ಅವರು ಹೇಳಿದ್ದರು' ಎಂದು ಹೇಳಿದರು.

ಅಂದು ಗಾಂಧಿ ಅವರಿಂದ ಆ ಕೆಲಸ ಆಗಲಿಲ್ಲ. ಈಗ ಕಾಂಗ್ರೆಸ್‌ ಪಕ್ಷವನ್ನು ಕೆಲವು ವ್ಯಕ್ತಿಗಳೇ ವಿಸರ್ಜಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ಹೆಸರೆತ್ತದೇ ಟೀಕಿಸಿದರು.

ದೇಶದಲ್ಲಿ 1650 ರಾಜಕೀಯ ಪಕ್ಷ ಇವೆ. ಆಂತರಿಕ ಪ್ರಜಾಪ್ರಭುತ್ವ ಇರುವುದು ಬಿಜೆಪಿ ಹಾಗೂ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ದಲ್ಲಿ ಮಾತ್ರ. ಸೋನಿಯಾ ಗಾಂಧಿ ಬಳಿಕ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಾರೆ ಎಂಬುದು ಸ್ಪಷ್ಟ. ಆದರೆ ನನ್ನ ನಂತರ ಬಿಜೆಪಿ ಅಧ್ಯಕ್ಷ ಯಾರು ಎಂಬುದನ್ನು ಯಾರೂ ಹೇಳಲಾಗದು ಎಂದು ಹೇಳಿದರು.

ಕಾಂಗ್ರೆಸ್‌ ಟೀಕೆ: ಜಾತೀಯತೆ ವಿರುದ್ಧ ಹೋರಾಡುವ ಬದಲು ಬಿಜೆಪಿ ಅಧ್ಯಕ್ಷರು ಗಾಂಧೀಜಿಯನ್ನೂ ಅವರ ಜಾತಿಯ ಮೂಲಕವೇ ಗುರುತಿಸಿದ್ದಾರೆ. ಈ ಜನರು ದೇಶವನ್ನು ಎಲ್ಲಿಗೆ ಒಯ್ಯುತ್ತಾರೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಟೀಕಿಸಿದ್ದಾರೆ. ಶಾ ಒಬ್ಬ ಅಧಿಕಾರದ ವ್ಯಾಪಾರಿ. ಸ್ವಾತಂತ್ರ್ಯ ಪೂರ್ವದಲ್ಲಿ ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾವನ್ನು ದೇಶ ವಿಭಜಿಸುವ ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ)ವಾಗಿ ಬ್ರಿಟಿಷರು ಬಳಸಿಕೊಂಡಿದ್ದರು ಎಂದು ಕುಟುಕಿದ್ದಾರೆ.

Follow Us:
Download App:
  • android
  • ios