ಮುಂಬೈ[ಸೆ.10]: ಹತ್ತು ಹೆತ್ತವರ ಬಗ್ಗೆ ಕೇಳಿದ್ದೀರಿ ನೋಡಿದ್ದೀರಿ. ಆದರೆ ಇಪ್ಪತ್ತು ಮಕ್ಕಳನ್ನು ಹೆತ್ತವರ ಬಗ್ಗೆ ಕೇಳಿದ್ದೀರಾ? ಅದರಲ್ಲೂ 38ನೆÜ ವಯಸ್ಸಿಗೆ? ಸಾಧ್ಯವೇ ಇಲ್ಲ ಅನ್ನುತ್ತೀರಿ ಅಲ್ಲವೇ? ಆದರೆ ಇಲ್ಲೊಬ್ಬಳು ಮಹಾತಾಯಿ ಕೇವಲ 38ನೇ ವಯಸ್ಸಿಗೆ 20ನೇ ಬಾರಿ ಗರ್ಭಿಣಿಯಾಗಿ ಹುಬ್ಬೇರುವಂತೆ ಮಾಡಿದ್ದಾಳೆ.

ಇಂಥ ಅಪರೂಪದಲ್ಲಿ ಅಪರೂಪ ಎನ್ನುವ ಘಟನೆ ನಡೆದಿದ್ದು ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಮಜಲ್‌ಗೌನ್‌ನ ಕೇಸಪುರಿ ಎಂಬಲ್ಲಿ. ಅಲೆಮಾರಿ ಗೋಪಾಲ್‌ ಜನಾಂಗಕ್ಕೆ ಸೇರಿದ ಲಂಕಾಬಾಯ್‌ ಕಾರಟ್‌ ಎಂಬಾಕೆ ಈ ವರೆಗೆ 19 ಹೆರಿಗೆಗಳನ್ನು ಮಾಡಿಸಿಕೊಂಡಿದ್ದು, ಈಗ 20ನೇ ಬಾರಿಗೆ ಗರ್ಭವತಿಯಾಗಿದ್ದಾಳೆ. ಈ ಹಿಂದೆ 19 ಬಾರಿ ಗರ್ಭ ಧರಿಸಿದ್ದ ವೇಳೆ 16 ಸಲ ಸುರಕ್ಷಿತ ಹೆರಿಗೆ ಆಗಿದ್ದರೆ, 3 ಬಾರಿ ಗರ್ಭಪಾತವಾಗಿದೆ. 16 ಸಲ ಹೆರಿಗೆ ಆದ ವೇಳೆ, ಪ್ರತಿ ಬಾರಿಯೂ ಆಕೆ ಒಂದೊಂದು ಮಗುವನ್ನು ಹೆತ್ತಿದ್ದಾಳೆ. ಈ ಪೈಕಿ 5 ಮಕ್ಕಳು ನಾನಾ ಸಮಯದಲ್ಲಿ ಸಾವನ್ನಪ್ಪಿವೆ. ಹಾಲಿ ವಿವಿಧ ವಯೋಮಾನದ 11 ಮಕ್ಕಳು ಜೀವಂತವಾಗಿದ್ದಾರೆ.

ಇದೀಗ ಆಕೆ 20ನೇ ಗರ್ಭ ಧರಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆತಂದು ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದೆ. ತಾಯಿ ಹಾಗೂ ಮಗೂ ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಆಶೋಕ್‌ ಥೋರಟ್‌ ಹೇಳಿದ್ದಾರೆ.