ಮಹಾರಾಷ್ಟ್ರ[ಮೇ.11]: ವೈದ್ಯಕೀಯ ಶಿಕ್ಷಣದಲ್ಲಿ ವ್ಯಾಸಂಗ ನಡೆಸುತ್ತಿದ್ದ ವಿದ್ಯರ್ಥಿಯೊಬ್ಬ ತಾನು ಫೇಲ್ ಆಗಲು ನೀನೇ ಕಾರಣ ಎಂದು ತನ್ನ ಪ್ರಿಯತಮೆಯನ್ನೇ ಹೊಣೆಗಾರಳನ್ನಾಗಿಸಿದ್ದಾನೆ. ಅಲ್ಲದೇ ನೀನೇ ಫೀಸ್ ಕಟ್ಟು ಎಂದು ಹಠ ಹಿಡಿದಿದ್ದಾನೆ. ಸದ್ಯ ಈ ಭೂಪ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು ಹೋಮಿಯೋಪಥಿ ಮತ್ತು ಸರ್ಜರಿಯಲ್ಲಿ ಮೊದಲ ವರ್ಷದ ವ್ಯಾಸಂಗ ನಡೆಸುತ್ತಿದ್ದ ಔರಂಗಾಬಾದ್‌ ನ ಬೀಡ್ ಜಿಲ್ಲೆಯ 21 ವರ್ಷದ ಪ್ರತಿಭಾವಂತ ವಿದ್ಯಾರ್ಥಿ ಸದ್ಯ ಫೇಲ್ ಆಗಿದ್ದಾನೆ. ಈ ಮೂಲಕ ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲು ಅನರ್ಹಗೊಂಡಿದ್ದಾನೆ. ಇದರಿಂದ ಬೇಸತ್ತ ಯುವಕ 'ನಾನು ಅನುತ್ತೀರ್ಣಗೊಳ್ಳಲು ನನ್ನ ಪ್ರಿಯತಮೆಯೇ ಕಾರಣ' ಎಂದು ಆರೋಪಿಸಿದ್ದಾನೆ. ಆಕೆಯೇ ತನಗೆ ಓದಲು ಸಮಯ ಕೊಡದೆ, ಪಾಸಾಗದಂತೆ ಅಡ್ಡಿಪಡಿಸಿದ್ದಾಳೆ, ಹೀಗಾಗಿ ಈಗ ಅವಳೇ ಪ್ರಥಮ ವರ್ಷದ ಶುಲ್ಕ ಭರಿಸಲಿ ಎಂದು ಹಠ ಹಿಡಿದಿದ್ದಾನೆ.

ಇನ್ನು ಆತ ಪ್ರೀತಿಸುತ್ತಿದ್ದ ಯುವತಿ ಆತನ ಸಹಪಾಠಿಯಾಗಿದ್ದು, ಯುವಕ ಫೇಲಾದ ಬಳಿಕ ಬಹಳಷ್ಟು ಅಂತರ ಕಾಯ್ದುಕೊಂಡಿದ್ದಾಳೆ. ಆಕೆಯನ್ನು ಒಲಿಸಲು ಆತ ಅದೆಷ್ಟೇ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕರೆ ಮಾಡಿ ಮಾತನಾಡಲೂ ಯತ್ನಿಸಿದ್ದಾನೆ. ಆದರೆ ಯುವತಿ ಇದ್ಯಾವುದನ್ನೂ ಲೆಕ್ಕಿಸದಾಗ ಸಾಮಾಝಿಕ ಜಾಲತಾಣವನ್ನು ದುರುಪಯೋಗಪಡಿಸಲಾರಂಭಿಸಿದ್ದಾನೆ ಹಾಗೂ ಯುವತಿಯ ಹೆತ್ತವರ ಕುರಿತಾಗಿ ಕೆಟ್ಟದಾಗಿ ಬರೆಯಲಾರಂಭಿಸಿದ್ದಾನೆ.

ಇಷ್ಟೇ ಅಲ್ಲದೇ 'ನನ್ನ ಪ್ರಥಮ ವರ್ಷದ ಶುಲ್ಕ ನೀನೇ ಭರಿಸಬೇಕು. ಇಲ್ಲವಾದಲ್ಲಿ ನಿನ್ನ ಖಾಸಗಿ ಪೋಟೋಗಳನ್ನು ಲೀಕ್ ಮಾಡುವುದಾಗಿಯೂ ಯುವತಿಗೆ ಬೆದರಿಕೆಯೊಡ್ಡಿದ್ದಾನೆ' ಇದರಿಂದ ಬೆಚ್ಚಿ ಬಿದ್ದ ಯುವತಿ ಪೊಲೀಸ್ ಠಾಣೆ  ಮೆಟ್ಟಿಲೇರಿದ್ದು, ಸದ್ಯ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.