'೨೦೧೯ಕ್ಕೆ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸುತಾರಾಂ ಬೇಡ'| 'ನರೇಂದ್ರ ಮೋದಿ ಪ್ರಧಾನಿ ಹುದ್ದಗೆ ಸೂಕ್ತ ವ್ಯಕ್ತಿ ಅಲ್ಲ'| ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ರೈತ ನಾಯಕನ ಪತ್ರ|ಮೋಹನ್ ಭಾಗವತ್‌ಗೆ ಪತ್ರ ಬರೆದ ಕಿಶೋರ್ ತಿವಾರಿ| ವಸಂತರಾವ್ ನಾಯಕ್ ಶೇಠಿ ಸ್ವಾವಲಂಬನ್ ಮಿಶನ್ ಮುಖ್ಯಸ್ಥ| ಮೋದಿ ಬದಲಿಗೆ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಘೋಷಿಸುವಂತೆ ಮನವಿ

ಮುಂಬೈ(ಡಿ.18): 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ದೆಹಲಿ ಗದ್ದುಗೆ ಮೇಲೆ ವಿಜೃಂಭಿಸಲು ಬಿಜೆಪಿ ಸಿದ್ಧವಾಗಿದೆ.

ಈ ಮಧ್ಯೆ ಬಿಜೆಪಿ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ ಕೂಡ 2019ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಾಧ್ಯವಾದ ಸಹಾಯ ಮಾಡುತ್ತಿದೆ. ಈ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ತನ್ನ ಸೈದ್ಧಾಂತಿಕ ಅಧಿಕಾರ ಹೊಂದುವ ಅಭಿಲಾಷೆಯಿಂದ ಕೆಲಸ ಮಾಡುತ್ತಿವೆ.

ಆದರೆ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಬಾರದು ಎಂದು ಮಹಾರಾಷ್ಟ್ರದ ರೈತ ನಾಯಕರೊಬ್ಬರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರದ ವಸಂತರಾವ್ ನಾಯಕ್ ಶೇಠಿ ಸ್ವಾವಲಂಬನ್ ಮಿಶನ್(VNSSM) ಮುಖ್ಯಸ್ಥ ಕಿಶೋರ್ ತಿವಾರಿ ಈ ಪತ್ರ ಬರೆದಿದ್ದು, 2019ರ ಲೋಕಸಭೆಚುನಾವಣೆಯಲ್ಲಿ ನರೇಂದ್ರ ಮೋದಿ ಬದಲಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಭಾಗವತ್ ಅವರಿಗೆ ಮನವಿ ಮಾಡಿದ್ದಾರೆ.

ಮೋದಿ ಸರ್ವಾಧಿಕಾರಿ ನಡೆ, ಅವರ ಉಗ್ರಗ್ರಾಮಿ ನಡುವಳಿಕೆಯಿಂದ ದೇಶಕ್ಕೆ ಅಪಾಯವಿದ್ದು, ಮೋದಿ ಬದಲು ನಿತಿನ್ ಗಡ್ಕರಿ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಕಿಶೋರ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ವಸಂತರಾವ್ ನಾಯಕ್ ಶೇಠಿ ಸ್ವಾವಲಂಬನ್ ಮಿಶನ್ ಮಹಾರಾಷ್ಟ್ರ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಕಿಶೋರ್ ತಿವಾರಿ ಅವರ ಈ ಪತ್ರ ಬಿಜೆಪಿ ವಲಯದಲ್ಲಿ ತಲ್ಲಣ ಮೂಡಿಸಿದೆ.