ಮುಂಬೈ (ಮಾ. 3):  ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ, ಮತ್ತೊಮ್ಮೆ ಕರ್ನಾಟಕ ಮತ್ತು ತನ್ನ ನಡುವಿನ ಗಡಿ ವಿವಾದವನ್ನು ಕೆದಕುವ ಯತ್ನ ಮಾಡಿದೆ. ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಕುರಿತು 2 ವರ್ಷಗಳ ಬಳಿಕ ಸಿಎಂ ದೇವೇಂದ್ರ ಫಡ್ನವೀಸ್‌ ಉನ್ನತ ಮಟ್ಟದ ಸಭೆ ನಡೆಸಿದರು.

ಈ ವೇಳೆ ವಿವಾದಿತ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯುವ ಬಗ್ಗೆ ವಿವಿಧ ಕಾನೂನಿನ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮರಾಠಿಗರಿಗೂ ಸಹ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.16ರಷ್ಟುಮೀಸಲಾತಿ ಕಲ್ಪಿಸುವ ಕುರಿತು  ಉನ್ನತಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ.

ಈ ಕುರಿತು ಪರಿಷತ್ತಿನ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ ಮಾತನಾಡಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮನವಿಯಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ 865 ಗ್ರಾಮಗಳಿದ್ದು ಇಲ್ಲಿನವರಿಗೂ ಮೀಸಲಾತಿ ಲಭಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅಲ್ಲಿನ ಯುವಕರಿಗೆ ಮಹಾ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಸಭೆಯಲ್ಲಿ ಕಂದಾಯ ಸಚಿವ ಚಂದ್ರಕಾಂತ ಪಾಟೀಲ, ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಇದ್ದರು.