-ವಿಜಯ್‌ ಮಲಗಿಹಾಳ

ಬೆಂಗಳೂರು[ಆ.07]: ಮುಂದಿನ ದಿನಗಳಲ್ಲಿ ಎದುರಾಗಲಿರುವ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನರ್ಹಗೊಂಡಿರುವ ಶಾಸಕ ಕೆ.ಗೋಪಾಲಯ್ಯ ಅವರನ್ನು ಪರಾಭವಗೊಳಿಸುವ ರಣತಂತ್ರ ಹೆಣೆಯುವ ಕೆಲಸ ಈಗಿನಿಂದಲೇ ಆರಂಭವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ.

ಗೋಪಾಲಯ್ಯ ಅವರನ್ನು ಎದುರಿಸಲು ನಾರಾಯಣಗೌಡರಂಥ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅಥವಾ ಬೆಂಬಲಿಸುವುದು ಸೂಕ್ತ ಎಂಬ ಒತ್ತಡ ಜೆಡಿಎಸ್‌ ಮತ್ತು ಕಾಂಗ್ರೆಸ್ಸಿನ ಸ್ಥಳೀಯ ಮಟ್ಟದ ಮುಖಂಡರಿಂದ ಕೇಳಿಬರುತ್ತಿದ್ದು, ಇದಕ್ಕೆ ಪೂರಕವಾಗಿ ಕಾಂಗ್ರೆಸ್ಸಿನ ಪ್ರಭಾವಿ ನಾಯಕರೊಬ್ಬರು ಈ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗೋಪಾಲಯ್ಯ ಅವರು ಬಿಜೆಪಿಯಿಂದ ಕಣಕ್ಕಿಳಿಯುವ ನಿರೀಕ್ಷೆ ಇರುವುದರಿಂದ ಆ ಪಕ್ಷದಲ್ಲಿರುವ ಅತೃಪ್ತ ಮುಖಂಡರು ಹಾಗೂ ಕಾರ್ಯಕರ್ತರೂ ನಾರಾಯಣಗೌಡರನ್ನು ಬೆಂಬಲಿಸಬಹುದು ಎಂಬ ಲೆಕ್ಕಾಚಾರ ಈ ತಂತ್ರದ ಹಿಂದೆ ಅಡಗಿದೆ ಎಂದು ತಿಳಿದು ಬಂದಿದೆ.

ಇದುವರೆಗೆ ನಾರಾಯಣಗೌಡರು ಚುನಾವಣಾ ರಾಜಕಾರಣ ಪ್ರವೇಶಿಸುವ ಕುರಿತು ಪೂರ್ಣ ಮನಸ್ಸಿನಿಂದ ಸಹಮತ ವ್ಯಕ್ತಪಡಿಸಿಲ್ಲವಾದರೂ ತಾವು ಯಾವುದೇ ರಾಜಕೀಯ ಪಕ್ಷದಿಂದ ಕಣಕ್ಕಿಳಿಯುವುದಿಲ್ಲ ಎಂಬ ಮಾತನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸುವುದಾಗಿ ಸುಳಿವು ನೀಡಿದ್ದಾರೆ. ಅಂದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪರೋಕ್ಷವಾಗಿ ಅಥವಾ ನೇರವಾಗಿ ಬೆಂಬಲಿಸುವುದು ಖಚಿತವಾದರೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ನಿರ್ಧಾರ ಕೈಗೊಳ್ಳುವ ಮಾತನ್ನು ಹೇಳಿದ್ದಾರೆ.

ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ವೇದಿಕೆ ಅಧ್ಯಕ್ಷರಾದ ನಾರಾಯಣಗೌಡರು ಚುನಾವಣಾ ರಾಜಕೀಯ ಪ್ರವೇಶಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರ ನೆಲೆ ಕಂಡುಕೊಂಡಿರುವ ಗೋಪಾಲಯ್ಯ ಅವರನ್ನು ಎದುರಿಸುವುದು ಸುಲಭದ ಸಂಗತಿಯಲ್ಲ. 2018ರ ಚುನಾವಣೆಯಲ್ಲಿ ಗೋಪಾಲಯ್ಯ ಅವರು ಶೇ.55ರಷ್ಟುಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಮತ ಗಳಿಕೆ ಒಟ್ಟುಗೂಡಿಸಿದರೂ ಗೋಪಾಲಯ್ಯ ಅವರ ಮತ ಗಳಿಕೆ ಪ್ರಮಾಣವನ್ನು ಸರಿಗಟ್ಟಲು ಆಗಲಿಲ್ಲ.

ಹೀಗಾಗಿ, ಈ ಬಾರಿ ಉಪಚುನಾವಣೆ ನಡೆದರೂ ಗೋಪಾಲಯ್ಯ ಅವರನ್ನು ಎದುರಿಸುವುದು ಕಷ್ಟದ ಸಂಗತಿ ಎಂಬುದನ್ನು ಮನಗಂಡಿರುವ ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು ಒಮ್ಮತದ ಅಭ್ಯರ್ಥಿಯನ್ನಾಗಿ ಪ್ರಬಲ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಬೇಕು ಎಂಬ ನಿಲವಿಗೆ ಬರತೊಡಗಿದ್ದಾರೆ. ಆ ಪ್ರಬಲ ವ್ಯಕ್ತಿ ನಾರಾಯಣಗೌಡರೇ ಆಗಲಿ ಎಂಬ ಮಾತು ಪ್ರಸ್ತಾಪವಾಗಿದೆ.

ಈ ಕ್ಷೇತ್ರದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಕುಣಿಗಲ್‌, ಮಾಗಡಿ ಭಾಗದಿಂದ ಬಂದವರು ಅದರಲ್ಲೂ ಒಕ್ಕಲಿಗರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಜತೆಗೆ ಗಾರ್ಮೆಂಟ್ಸ್‌ ಕಾರ್ಖಾನೆಗಳಿರುವುದರಿಂದ ಅಲ್ಲಿನ ಸಂಘಟನೆಗಳಲ್ಲದೆ ವಿವಿಧ ಕನ್ನಡಪರ ಸಂಘಟನೆಗಳು ರಕ್ಷಣಾ ವೇದಿಕೆಯ ನಾರಾಯಣಗೌಡರನ್ನು ಬೆಂಬಲಿಸಬಹುದು ಎಂಬ ನಿರೀಕ್ಷೆಯಿದೆ. ಕಳೆದ 2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಕ್ಷಣಾ ವೇದಿಕೆಯಿಂದ ಕೆಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗ ಅವರು ಹೆಚ್ಚಿನ ಮತಗಳನ್ನೂ ಗಳಿಸಿದ್ದರು. ಇದೆಲ್ಲವನ್ನೂ ಪರಿಗಣಿಸಿ ನಾರಾಯಣಗೌಡರನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆಯುತ್ತಿದೆ.

ಮಹಾಲಕ್ಷ್ಮಿ ಲೇಔಟ್‌ನಿಂದ ಸ್ಪರ್ಧಿಸಲು ಒತ್ತಡವಿದೆ. ಹಾಗೊಂದು ವೇಳೆ ಸ್ಪರ್ಧಿಸುವುದಾದರೆ ಪಕ್ಷೇತರನಾಗಿಯೇ ಹೊರತು ಯಾವುದೇ ರಾಜಕೀಯ ಪಕ್ಷದಿಂದ ಅಲ್ಲ. ನಾನು ಯಾವುದೇ ಪಕ್ಷದ ಅಭ್ಯರ್ಥಿಯಾಗುವುದಿಲ್ಲ. ಗುರುವಾರ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಭೆ ಇದ್ದು, ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.

-ಟಿ.ಎ. ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ