ರಾಜ್ಯಕ್ಕೆ ಮಹದಾಯಿ ನೀರು ಸಿಗದಂತೆ ಗೋವಾ ಮಾಡಿದೆ ಕುತಂತ್ರ

First Published 18, Feb 2018, 10:36 AM IST
Mahadayi river water Dispute
Highlights

ಗೋವಾವು ಪ್ರಸಕ್ತ ಬಳಸಿಕೊಳ್ಳುತ್ತಿರುವ ಒಂಬತ್ತು ಟಿಎಂಸಿ ನೀರಿನ ಬಳಕೆ ಬಗ್ಗೆ ಕರ್ನಾಟಕ ಆಕ್ಷೇಪ ಎತ್ತುವುದಿಲ್ಲ. ಆದರೆ ಕರ್ನಾಟಕಕ್ಕೆ ಮಹದಾಯಿ ನೀರು ಸಿಗಬಾರದು ಎಂಬ ಕಾರಣಕ್ಕಾಗಿ ಗೋವಾ ತನ್ನ ಬಳಕೆಯ, ಅಗತ್ಯ ಮತ್ತು ಬೇಡಿಕೆ ಪ್ರಮಾಣವನ್ನು ಹಿಗ್ಗಿಸಿ ಹೇಳುತ್ತಿದೆ ಎಂದು ಕರ್ನಾಟಕ ಆರೋಪಿಸಿದೆ.

ರಾಕೇಶ್ ಎನ್.ಎಸ್

ನವದೆಹಲಿ : ಗೋವಾವು ಪ್ರಸಕ್ತ ಬಳಸಿಕೊಳ್ಳುತ್ತಿರುವ ಒಂಬತ್ತು ಟಿಎಂಸಿ ನೀರಿನ ಬಳಕೆ ಬಗ್ಗೆ ಕರ್ನಾಟಕ ಆಕ್ಷೇಪ ಎತ್ತುವುದಿಲ್ಲ. ಆದರೆ ಕರ್ನಾಟಕಕ್ಕೆ ಮಹದಾಯಿ ನೀರು ಸಿಗಬಾರದು ಎಂಬ ಕಾರಣಕ್ಕಾಗಿ ಗೋವಾ ತನ್ನ ಬಳಕೆಯ, ಅಗತ್ಯ ಮತ್ತು ಬೇಡಿಕೆ ಪ್ರಮಾಣವನ್ನು ಹಿಗ್ಗಿಸಿ ಹೇಳುತ್ತಿದೆ ಎಂದು ಕರ್ನಾಟಕ ಆರೋಪಿಸಿದೆ.

ಮಹದಾಯಿ ನ್ಯಾಯಾಧಿಕರಣದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಬಗ್ಗೆ ನಡೆಯುತ್ತಿರುವ ಅಂತಿಮ ಸುತ್ತಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಪರ ವಾದಿಸಿದ ಮೋಹನ್ ಕಾತರಕಿ, ಕರ್ನಾಟಕಕ್ಕೆ ಮಹದಾಯಿಯಲ್ಲಿ ಪಾಲು ಸಿಗುವುದನನ್ನು ತಪ್ಪಿಸಬೇಕೆಂಬ ಉದ್ದೇಶದಿಂದಲೇ ಗೋವಾ ಕ್ಯಾತೆ ಮಾಡುತ್ತಿದೆ ಎಂದು ಹೇಳಿದರು.

ಕರ್ನಾಟಕಕ್ಕೆ ಮಹದಾಯಿಯಲ್ಲಿ ನ್ಯಾಯಯುತ ಪಾಲು ಸಿಗಬೇಕು. ಆದರೆ ಆ ಪಾಲು ಎಷ್ಟು ಎಂದು ನಿರ್ಧರಿಸುವುದು ನ್ಯಾಯಾಧಿಕರಣದ ಕರ್ತವ್ಯ. ನಾವು ನಮ್ಮ ಯೋಜನೆಗಳಿಗೆ ನೀರು ಕೇಳುತ್ತೇವೆ. ಆದರೆ ನಮ್ಮ ಪಾಲನ್ನು ನ್ಯಾಯಾಧಿಕರಣವೇ ನಿರ್ಧರಿಸಲಿ ಎಂದು ಕಾತರಕಿ ತಿಳಿಸಿದರು.

ಕುಡಿಯುವ ನೀರಿಗೆ ಆದ್ಯತೆಯಲ್ಲಿ ನೀರು ನೀಡಬೇಕು ಎಂದು ಕಾವೇರಿ ಪ್ರಕರಣದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ. ಅಷ್ಟೇ ಅಲ್ಲದೆ, ಕಾವೇರಿ ಕೊಳ್ಳದಿಂದ ಹೊರಗಿದ್ದ ಬೆಂಗಳೂರಿಗೂ ಕಾವೇರಿ ನೀರನ್ನು ಸುಪ್ರೀಂ ನೀಡಿದೆ ಎಂದು ಕಾತರಕಿ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ನ್ಯಾಯಾಧಿಕರಣವು ಅಂತರ್ ಕೊಳ್ಳಕ್ಕೂ ನೀರು ಹರಿಸಲು ಅವಕಾಶ ಎಂದರೆ ಹೇಗೆ? ಮಹದಾಯಿಯನ್ನು ತಿರುಗಿಸಲು ಬಿಟ್ಟರೆ ಅದನ್ನು ಎಲ್ಲೆಲ್ಲಿಗೆ ಕೊಂಡು ಹೋಗುತ್ತಿರಾ ಎಂದು ಪ್ರಶ್ನಿಸಿತು. 

ಆಗ ಕಾತರಕಿ, ರಾಜ್ಯಗಳು ತಮ್ಮ ಯೋಜನೆಗಳಿಗೆ ತಕ್ಕ ಸಮರ್ಥನೆ ನೀಡಿರಬೇಕು. ಕೊಳ್ಳದಲ್ಲಿ ನೀರನ್ನು ಸೂಕ್ತ ರೀತಿಯಲ್ಲಿ ಬಳಸಿದ ಬಳಿಕ ಹೆಚ್ಚುವರಿ ನೀರು ಇದ್ದರೆ ಅದನ್ನು ಕೊಳ್ಳದ ಹೊರಗೂ ಸಾಗಿಸಬಹುದು ಎಂದು ಸಮಜಾಯಿಷಿ ನೀಡಿದರು.

ಕಾವೇರಿ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ವಾದ ಮಂಡನೆ ಮಾಡಲು ಮಾರ್ಚ್‌ನಲ್ಲಿ ಒಂದೆರಡು ದಿನಗಳ ವಿಚಾರಣೆ ನಿಗದಿ ಮಾಡಿ ಎಂಬ ಕಾತರಕಿ ಅವರ ನಿವೇದನೆಯನ್ನೂ ನ್ಯಾಯಾಧಿಕರಣ ತಳ್ಳಿ ಹಾಕಿತು. ಇದೇ ವೇಳೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗೆ ಕಾವೇರಿ ತೀರ್ಪಿನ ಬಗ್ಗೆ ಟಿಪ್ಪಣಿಯೊಂದನ್ನು ನೀಡಲು ನ್ಯಾಯಾಧಿಕರಣ ಸೂಚಿಸಿದೆ.

loader