ಹೊಸ ವರ್ಷದ ಜನವರಿ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುವ ವೇಳೆಗಾದರೂ ರಾಜ್ಯ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿರುವ ಮಹದಾಯಿ ಯೋಜನೆಗೆ ಪರಿಹಾರ ಸಿಗುತ್ತಾ ಎಂಬ ಕುತೂಹಲ ಪಕ್ಷದ ಪಾಳೆಯದಲ್ಲಿ ಮೂಡಿದೆ.
ಬೆಂಗಳೂರು (ಡಿ.29): ಹೊಸ ವರ್ಷದ ಜನವರಿ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುವ ವೇಳೆಗಾದರೂ ರಾಜ್ಯ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿರುವ ಮಹದಾಯಿ ಯೋಜನೆಗೆ ಪರಿಹಾರ ಸಿಗುತ್ತಾ ಎಂಬ ಕುತೂಹಲ ಪಕ್ಷದ ಪಾಳೆಯದಲ್ಲಿ ಮೂಡಿದೆ.
ಮುಂಬರುವ ಚುನಾವಣೆಯಲ್ಲಿ ಮಹದಾಯಿ ವಿಷಯ ಉತ್ತರ ಕರ್ನಾಟಕದಲ್ಲಿ ತೀವ್ರ ಹೊಡೆತ ನೀಡಲಿದೆ ಎಂಬ ಆತಂಕ ಪಕ್ಷದಲ್ಲಿ ಬಲವಾಗಿ ಕಾಣಿಸಿಕೊಂಡಿದ್ದು, ಆದಷ್ಟು ಶೀಘ್ರ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ ಎಂಬ ಸಂದೇಶವನ್ನು ಈಗಾಗಲೇ ರಾಜ್ಯ ನಾಯಕರು ವರಿಷ್ಠರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಹೇಗಿದ್ದರೂ ಪ್ರಧಾನಿ ಮೋದಿ ಅವರು ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಬರುವ ಮೊದಲೇ ಅಥವಾ ಬಂದ ವೇಳೆ ಈ ಬಿಕ್ಕಟ್ಟು ಶಮನಗೊಂಡಲ್ಲಿ ಧೈರ್ಯವಾಗಿ ಚುನಾವಣೆ ಎದುರಿಸಬಹುದು. ಇಲ್ಲದಿದ್ದರೆ ಇಲ್ಲಿನ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಎದುರಿಸುವುದು ತೀರಾ ಕಷ್ಟ ಎಂಬ ಚಿಂತೆಯಲ್ಲಿ ರಾಜ್ಯ ನಾಯಕರು ಮುಳುಗಿದ್ದಾರೆ. ಹೀಗಾಗಿ, ಹೇಗಾದರೂ ಮಾಡಿ ಪ್ರಧಾನಿ ಮೋದಿ ಅವರು ಬಂದ ವೇಳೆ ಅವರಿಂದಲೇ ಈ ಸಮಸ್ಯೆಗೆ ಪರಿಹಾರ ಸೂತ್ರ ಪ್ರಕಟಿಸುವ ಅಥವಾ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಮಾತುಕತೆ ನಡೆಸುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದಲ್ಲಿ ಅದು ಪಕ್ಷಕ್ಕೆ ಅನುಕೂಲವಾಗಬಹುದು. ಸಾಧ್ಯವಾದರೆ ಸಮಾರೋಪ ಸಮಾರಂಭಕ್ಕೆ ಗೋವಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಗಳನ್ನೂ ಕರೆಸಬೇಕು ಎಂಬ ಚಿಂತನೆ ಪಕ್ಷದ ಕೆಲವು ನಾಯಕರಲ್ಲಿ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ಡಿ. 31 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
