ಭೋಪಾಲ್ : ಮಧ್ಯ ಪ್ರದೇಶ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ  ಇಮಾರ್ತಿ ದೇವಿ ಅವರು ಇಲ್ಲಿನ ಗ್ವಾಲಿಯರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣವನ್ನು ಓದಲು ವಿಫಲರಾಗಿದ್ದಾರೆ. 

ಓದಲಾಗದ ಕಾಂಗ್ರೆಸ್ ಸಚಿವೆ ತಮ್ಮ ಭಾಷಣವನ್ನು ಓದಲು ಜಿಲ್ಲಾಧಿಕಾರಿ  ಭರತ್ ಯಾದವ್ ಸಹಾಯವನ್ನು ಪಡೆದುಕೊಂಡಿದ್ದಾರೆ. 

ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿರುವ ಇಮಾರ್ತಿ ದೇವಿ ಭಾಷಣದ ಪ್ರತಿಯನ್ನು ಓದಲಾಗದೇ ವೇದಿಕೆಯಲ್ಲಿಯೇ ಚಡಪಸಿದ್ದು, ಸಾಕಷ್ಟು ಟೀಕೆಗೆ ಕಾರಣವಾಯಿತು. 

ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸಂಪುಟದಲ್ಲಿ ಡಿಸೆಂಬರ್ 25 ರಂದು ಇಮಾರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಅಧಿಕಾರ ಸ್ವೀಕಾರ ಮಾಡಿದರು. 

ಸಚಿವೆಯಾಗುವ ಮುನ್ನ ಅನೇಕ ಕಾಂಗ್ರೆಸ್ ಹುದ್ದೆಗಳನ್ನು ಈ ಮೊದಲು ನಿರ್ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು. ಬಳಿಕ  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. 

2008ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾಗಿದ್ದು, 2011 - 2014 ರವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆಯಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು. 

ದಾದ್ರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಇದೀಗ ಕಮಲ್ ನಾಥ್ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿದ್ದು,  ಓರ್ವ ಸಚಿವೆಯಾಗಿ ಓದಲು ಬಾರದೆ ಇರುವುದು ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.