ಭೋಪಾಲ್‌: ಇದು ಅಚ್ಚರಿ ಎನ್ನಿಸಿದರೂ ಸತ್ಯ. ಕಳೆದ 38 ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಪೊಲೀಸರಿಗೆ ವಾರದ ರಜೆ ಎಂಬುದೇ ಇರಲಿಲ್ಲ!

ಹೌದು. ಆದರೆ ಈ ವಿಚಿತ್ರ ನಿಯಮವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭಾಷೆಯಂತೆ ಕಮಲ್‌ನಾಥ್‌ ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರ ಹಿಂಪಡೆದಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಪೊಲೀಸರಿಗೆ ಕಡ್ಡಾಯ ವಾರದ ರಜೆ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಈವರೆಗೆ ಮಧ್ಯಪ್ರದೇಶ ಪೊಲೀಸರು ಕೇವಲ ಕ್ಯಾಷುವಲ್‌ ರಜೆಗಳು ಹಾಗೂ ಗಳಿಕೆ ರಜೆಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ಆದರೆ ವಾರದ ರಜೆ ಇರಲಿಲ್ಲ. ಆದರೆ ಜನವರಿ 3ರಂದು ನಾಥ್‌ ಸರ್ಕಾರ ಆದೇಶ ಹೊರಡಿಸಿ, ‘ಕಡ್ಡಾಯ ವಾರದ ರಜೆಯನ್ನು ಪೊಲೀಸರಿಗೆ ನೀಡಬೇಕು’ ಎಂದು ಆದೇಶ ಹೊರಡಿಸಿದ್ದಾರೆ. ಆದೇಶ ಹೊರಬಿದ್ದ ಕೂಡಲೇ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದ್ದು, ಮೊದಲ ದಿನ 8000ಕ್ಕೂ ಹೆಚ್ಚು ಪೊಲೀಸರು ವಾರದ ರಜೆ ಪಡೆದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಆದೇಶದಿಂದ ಪೊಲೀಸರು ಆನಂದತುಂದಿಲರಾಗಿದ್ದಾರೆ. ‘1981ರಲ್ಲಿ ಮಧ್ಯಪ್ರದೇಶ ಪೊಲೀಸ್‌ ಸೇವೆಗೆ ಸೇರಿದ ನಂತರ ಇದೇ ಮೊದಲ ಬಾರಿ ವಾರದ ರಜೆ ಪಡೆಯುತ್ತಿದ್ದೇನೆ’ ಎಂದು 56 ವರ್ಷದ ಪೊಲೀಸ್‌ ಸಿಬ್ಬಂದಿಯೊಬ್ಬರು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡರು.

ಇನ್ನು ಇದೇ ಮೊದಲ ಬಾರಿ ವಾರದ ರಜೆ ಪಡೆದ ಎಎಸ್‌ಐ ರಾಕೇಶ್‌ ಶರ್ಮಾ ಎಂಬುವವರು ‘ಎಷ್ಟೋ ವರ್ಷ ನಂತರ ನಾನು ನಿರಾಳನಾದೆ. ಮೊದಲ ವಾರದ ರಜೆಯಂದು ಕುಟುಂಬದ ಜತೆ ಪಿಕ್‌ನಿಕ್‌ ಕೈಗೊಂಡಿದ್ದೇನೆ’ ಎಂದರು.