ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇವೇ ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯಾದರೆ ಮಾದಾರ ಚೆನ್ನಯ್ಯ ಗುರುಪೀಠದ ಸ್ವಾಮಿಗಳಿಗೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಕೊಡುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಾದರೆ ಸಚಿವ ಆಂಜನೇಯ ಎದುರಾಗಿ ಹೊಳಲ್ಕೆರೆ ಕ್ಷೇತ್ರದ ಟಿಕೆಟ್ ಕೊಡುವ ಚಾನ್ಸ್ ಇದೆ ಎನ್ನಲಾಗಿದೆ.

ಬೆಂಗಳೂರು(ಆ. 29): ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಮಾಡುವ ಮೂಲಕ ಜಾತಿಯ ತಡೆಗೋಡೆಯನ್ನು ಯಶಸ್ವಿಯಾಗಿ ದಾಟಿದ್ದ ಬಿಜೆಪಿ ಈಗ ಕರ್ನಾಟಕದಲ್ಲೂ ಅಂಥದ್ದೇ ಪ್ರಯೋಗ ಮಾಡಲು ಮುಂದಾಗಿದೆಯಾ? ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಜೊತೆ ಮಾದಾರ ಚನ್ನಯ್ಯ ಸ್ವಾಮೀಜಿಯವರ ಆತ್ಮೀಯ ಒಡನಾಟ ಹೆಚ್ಚಾಗಿರುವುದು ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಮುಂಬರುವ ಚುನಾವಣೆಗಳಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿಯವರನ್ನು ಪಕ್ಷದಿಂದ ಕಣಕ್ಕಿಳಿಸುವ ಚಿಂತನೆ ನಡೆದಿದೆ. ಆದರೆ, ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಟಿಕೆಟ್ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇವೇ ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯಾದರೆ ಮಾದಾರ ಚೆನ್ನಯ್ಯ ಗುರುಪೀಠದ ಸ್ವಾಮಿಗಳಿಗೆ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಕೊಡುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಾದರೆ ಸಚಿವ ಆಂಜನೇಯ ಎದುರಾಗಿ ಹೊಳಲ್ಕೆರೆ ಕ್ಷೇತ್ರದ ಟಿಕೆಟ್ ಕೊಡುವ ಚಾನ್ಸ್ ಇದೆ ಎನ್ನಲಾಗಿದೆ.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಸ್ವಾಮಿಗಳು ಮೊದಲಿಂದಲೂ ಆರೆಸ್ಸೆಸ್ ಮತ್ತು ಬಿಜೆಪಿಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಹಿಂದೆ ಪೇಜಾವರಶ್ರೀಗಳು ದಲಿತ ಕೇರಿಗಳಿಗೆ ಪಾದಯಾತ್ರೆ ಕೈಗೊಂಡ ಬೆನ್ನಲ್ಲೇ ಮಾದಾರ ಚೆನ್ನಯ್ಯ ಶ್ರೀಗಳೂ ಕೂಡ ಬ್ರಾಹ್ಮಣ ಕೇರಿಗಳಿಗೆ ಪಾದಯಾತ್ರೆ ನಡೆಸಿದ್ದರು. ನಿನ್ನೆ ಬಿಎಸ್'ವೈ ಮನೆಯಲ್ಲಿ ದಲಿತರಿಗೆ ಔಟಣಕೂಟ ಏರ್ಪಡಿಸುವ ಯೋಜನೆಯ ಹಿಂದಿನ ಮೈಂಡ್ ಇವರದ್ದೇ ಆಗಿತ್ತು. ಬಿಎಸ್'ವೈಗೆ ಇಂಥದ್ದೊಂದು ಸಲಹೆಯನ್ನು ನೀಡಿದ್ದು ಮಾದಾರ ಚೆನ್ನಯ್ಯ ಸ್ವಾಮಿಗಳೇ. ಔಟಣಕೂಟದಲ್ಲಿ ಶ್ರೀಗಳೂ ಪಾಲ್ಗೊಂಡಿದ್ದರು. ಯಡಿಯೂರಪ್ಪ, ಈಶ್ವರಪ್ಪ, ಅಶೋಕ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರ ಜೊತೆ ಸ್ವಾಮಿಗಳು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.

ಮಾದಿಗ ದಲಿತ ಸಮುದಾಯಕ್ಕೆ ಸೇರಿದವರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಬಿಜೆಪಿ ಪಾಲಿಗೆ ಟ್ರಂಪ್ ಕಾರ್ಡ್ ಆಗಿ ಪರಿಣಮಿಸುತ್ತಾರಾ ಎಂಬುದನ್ನು ಕಾದುನೋಡಬೇಕು.