Asianet Suvarna News Asianet Suvarna News

ರಾಮಚಂದ್ರಪ್ಪಗೆ ಸಿಗುತ್ತಾ ಮೇಲ್ಮನೆ ಭಾಗ್ಯ?

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ತನ್ನ ಪಾಲಿಗೆ ಬರಲಿರುವ ನಾಲ್ಕು ಸ್ಥಾನಗಳಲ್ಲಿ ಕನಿಷ್ಠ ಒಂದು ಸ್ಥಾನವನ್ನಾದರೂ ಪಕ್ಷದ ಬೇರು ಮಟ್ಟದ ಕಾರ್ಯಕರ್ತ ಎನಿಸಿದ ಮಾಜಿ ಮೇಯರ್‌ ಎಂ. ರಾಮಚಂದ್ರಪ್ಪ ಅವರಿಗೆ ನೀಡಬೇಕು ಎಂಬ ತೀವ್ರ ಒತ್ತಡ ಕಾಂಗ್ರೆಸ್‌ ವಲಯದಲ್ಲಿ ನಿರ್ಮಾಣವಾಗಿದೆ.

M Ramachandrappa may replace Byrathi Suresh

ಬೆಂಗಳೂರು :  ಪಕ್ಷ ಕಟ್ಟುವವರೇ ಬೇರೆ, ಅಧಿಕಾರ ಅನುಭವಿಸುವವರೇ ಬೇರೆ ಎಂಬುದು ಎಲ್ಲ ಪಕ್ಷಗಳ ಕಾರ್ಯಕರ್ತರ ಮನದಾಳದ ಮಾತು. ಆದರೆ, ಈ ಮಾತು ಅತಿ ಹೆಚ್ಚು ಅನ್ವಯವಾಗುವುದು ಕಾಂಗ್ರೆಸ್‌ ಪಕ್ಷಕ್ಕೆ. ಇದರ ಪರಿಣಾಮ ತನಗೆ ಕೇಡರ್‌ ಇಲ್ಲ ಎಂದು ಕಾಂಗ್ರೆಸ್‌ ನಾಯಕತ್ವಕ್ಕೆ ಕೊರಗು.

ಈ ಬಾರಿ ತುಸುವಾದರೂ ಇಂತಹದೊಂದು ಕೊರಗುವಿಕೆಯಿಂದ ಪಾರಾಗುವ ಉತ್ತಮ ಅವಕಾಶ ಕೂಡಿ ಬಂದಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ತನ್ನ ಪಾಲಿಗೆ ಬರಲಿರುವ ನಾಲ್ಕು ಸ್ಥಾನಗಳಲ್ಲಿ ಕನಿಷ್ಠ ಒಂದು ಸ್ಥಾನವನ್ನಾದರೂ ಪಕ್ಷದ ಬೇರು ಮಟ್ಟದ ಕಾರ್ಯಕರ್ತ ಎನಿಸಿದ ಮಾಜಿ ಮೇಯರ್‌ ಎಂ. ರಾಮಚಂದ್ರಪ್ಪ ಅವರಿಗೆ ನೀಡಬೇಕು ಎಂಬ ತೀವ್ರ ಒತ್ತಡ ಕಾಂಗ್ರೆಸ್‌ ವಲಯದಲ್ಲಿ ನಿರ್ಮಾಣವಾಗಿದೆ.

ಅರ್ಹತೆ, ಜಾತಿ ಲೆಕ್ಕಾಚಾರ ಸೇರಿದಂತೆ ಪ್ರತಿಯೊಂದು ಅಂಶವೂ ಈ ಬಾರಿ ರಾಮಚಂದ್ರಪ್ಪ ಅವರ ಪರವಿದೆ. ಕುರುಬ ಜನಾಂಗಕ್ಕೆ ಸೇರಿದ ಬೈರತಿ ಸುರೇಶ್‌ ಅವರು ಹೆಬ್ಬಾಳದಿಂದ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವು ಮಾಡಿದ ವಿಧಾನಪರಿಷತ್ತಿನ ಸದಸ್ಯ ಸ್ಥಾನವನ್ನು ಪಕ್ಷದ ನಾಯಕತ್ವ ಮನಸ್ಸು ಮಾಡಿದರೆ ರಾಮಚಂದ್ರಪ್ಪ ಅವರಿಗೆ ನೀಡಬಹುದು.

ಕಾಂಗ್ರೆಸ್‌ ಪಕ್ಷದ ಅತಿ ದೊಡ್ಡ ಕೊರಗು ತನಗೆ ಕೇಡರ್‌ ಇಲ್ಲ ಎಂಬುದು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಸಂವಾದಿಯಾಗಿ ಕಾಂಗ್ರೆಸ್‌ ಪಕ್ಷದ ಪರ ನಿಲ್ಲುವ ಕಟ್ಟರ್‌ ಕಾರ್ಯಕರ್ತರ ಪಡೆ ನಿರ್ಮಾಣ ಮಾಡಬೇಕು ಎಂದು ಆಗಾಗ ಕಾಂಗ್ರೆಸ್‌ ನಾಯಕರು ಹೇಳುತ್ತಾರೆ. ಆದರೆ, ಹೀಗೆ ಕೇಡರ್‌ ನಿರ್ಮಾಣವಾಗಬೇಕಾದರೆ ಅಧಿಕಾರ ಬಂದಾಗ ಬಿಜೆಪಿಯಂತೆ ಪಕ್ಷದ ಕಟ್ಟಾಳುಗಳಿಗೆ ಸ್ಥಾನ ನೀಡುವ ಮನಸ್ಸು ಮಾತ್ರ ಕಾಂಗ್ರೆಸ್‌ ನಾಯಕತ್ವ ಮಾಡುವುದಿಲ್ಲ.

ಈ ಮಾತಿಗೂ ಎಂ. ರಾಮಚಂದ್ರಪ್ಪ ಎಂಬ ಕಾಂಗ್ರೆಸ್‌ ಕಟ್ಟಾಳಿನ ನಲ್ವತ್ತು ವರ್ಷಗಳ ರಾಜಕೀಯ ಜೀವನವೇ ಸಾಕ್ಷಿ. 1971ರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್‌ ಪರ ಕೆಲಸ ಆರಂಭಿಸಿದ ರಾಮಚಂದ್ರಪ್ಪ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಸುಮಾರು 40 ಸಾವಿರ ಕಿ.ಮೀ. ಸಂಚಾರ ಮಾಡಿ ಪಕ್ಷದ ಪರ ದುಡಿಯುವವರೆಗೂ ಪಕ್ಷದ ಕಟ್ಟಾಳು ಆಗಿಯೇ ಕೆಲಸ ಮಾಡಿದ್ದಾರೆ.

ಇಷ್ಟುಸುದೀರ್ಘ ರಾಜಕೀಯ ಜೀವನದಲ್ಲಿ ರಾಮಚಂದ್ರಪ್ಪ ಅವರಿಗೆ ಕಾಂಗ್ರೆಸ್‌ ಪಕ್ಷ ಒಮ್ಮೆ ಮಾತ್ರ ಅಂದರೆ 1997ರಲ್ಲಿ ಬೆಂಗಳೂರು ನಗರ ಪಾಲಿಕೆಗೆ ಕಾರ್ಪೊರೇಟರ್‌ ಆಗಿ ಸ್ಪರ್ಧಿಸುವ ಅವಕಾಶ ನೀಡಿತ್ತು. ಆ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದ ರಾಮಚಂದ್ರಪ್ಪ ಅವರ ಕೆಲಸ ಹೇಗಿತ್ತು ಎಂದರೆ ಮೊದಲ ಬಾರಿ ಕಾರ್ಪೋರೇಟರ್‌ ಆಗಿದ್ದಾಗಲೇ 2000ರಲ್ಲಿ ಬೆಂಗಳೂರಿನ ಮೇಯರ್‌ ಆಗಿ, ನಗರ ಕಂಡ ಯಶಸ್ವಿ ಮೇಯರ್‌ಗಳ ಪೈಕಿ ಒಬ್ಬರೆನಿಸಿದರು.

ಇದಾದ ನಂತರ ಸಂಪ್ರದಾಯಕ್ಕೆ ಕಟ್ಟು ಬಿದ್ದ ರಾಮಚಂದ್ರಪ್ಪ (ಆಗ ಮೇಯರ್‌ ಆದವರು ಮತ್ತೆ ಪಾಲಿಕೆ ಚುನಾವಣೆಗೆ ಸ್ಪರ್ಧಿಸಬಾರದು ಎಂಬ ಅಲಿಖಿತ ಸಂಪ್ರದಾಯ ಬಿಎಂಪಿಯಲ್ಲಿತ್ತು. ಕೃಷ್ಣಯ್ಯರ್‌, ಜೆ.ಲಿಂಗಯ್ಯ ಅವರಂತಹ ಮೇಯರ್‌ಗಳು ಪಾಲಿಸಿದ ಸಂಪ್ರದಾಯವದು) ಮೊದಲ ಬಾರಿಗೆ ಕಾರ್ಪೋರೇಟರ್‌ ಆಗಿದ್ದರೂ ಸಹ ಮೇಯರ್‌ ಆದ ಕಾರಣಕ್ಕೆ ಪಾಲಿಕೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲಿಲ್ಲ. ಬಹುಶಃ ಈ ಸಂಪ್ರದಾಯ ಪಾಲಿಸಿದ ಕಡೆಯ ಮೇಯರ್‌ ಸಹ ರಾಮಚಂದ್ರಪ್ಪ ಅವರೇ ಇರಬಹುದು.

ಹೀಗೆ ಒಂದು ಬಾರಿ ಮಾತ್ರ ಅಧಿಕಾರದ ರುಚಿ ನೋಡಿದ ರಾಮಚಂದ್ರಪ್ಪ 2001ರಿಂದ ಪಕ್ಷದ ಕೆಲಸಕ್ಕೆ ನಿಂತುಬಿಟ್ಟರು. ಅಲ್ಲಂ ವೀರಭದ್ರಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ 2001ರಲ್ಲಿ ಕಾಂಗ್ರೆಸ್‌ ಕಚೇರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಆರಂಭಿಸಿದ ರಾಮಚಂದ್ರಪ್ಪ ಅನಂತರ ಕೆಪಿಸಿಸಿ ಅಧ್ಯಕ್ಷರಾದ ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ, ಆರ್‌.ವಿ. ದೇಶಪಾಂಡೆ, ಡಾ. ಪರಮೇಶ್ವರ್‌ ಸೇರಿದಂತೆ ಎಲ್ಲ ಅಧ್ಯಕ್ಷರೊಂದಿಗೂ ಕೆಲಸ ಮಾಡಿದರು.

ಕಾಂಗ್ರೆಸ್‌ ಸಿದ್ಧಾಂತಕ್ಕೆ ಕಟ್ಟುಬಿದ್ದ ರಾಮಚಂದ್ರಪ್ಪ ಅವರ ದುಡಿಮೆಯನ್ನು ಪರಿಗಣಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕತ್ವ ಮಾಡಿಲ್ಲ. ಜನಾರ್ದನ ಪೂಜಾರಿ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಒಂದು ಬಾರಿ ಮಾತ್ರ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಮಚಂದ್ರಪ್ಪ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಹೈಕಮಾಂಡ್‌ ಒಪ್ಪಿಗೆ ಕೂಡ ಪಡೆದು ಘೋಷಣೆ ಮಾತ್ರ ಬಾಕಿಯಿತ್ತು. ಈ ಹಂತದಲ್ಲಿ ನಡೆದ ರಾಜಕೀಯ ತಿಸ್ರದ ಪರಿಣಾಮ ಆ ಬಾರಿ ಅವಕಾಶ ಆರ್‌. ವೆಂಕಟೇಶ್‌ ಪಾಲಾಗಿತ್ತು.

ಹೀಗಾಗಿ ಅರ್ಹತೆ ಹೊಂದಿದ್ದರೂ ರಾಮಚಂದ್ರಪ್ಪ ಅವರು ತಮ್ಮ ಸಮಕಾಲೀನರು ಹಾಗೂ ಕಿರಿಯರೆನಿಸಿದ ಪ್ರಕಾಶ್‌ ರಾಥೋಡ್‌, ವಿ.ಎಸ್‌. ಉಗ್ರಪ್ಪ, ಕೆ. ಗೋವಿಂದರಾಜು, ಸೀತಾರಾಂ, ಜಲಜಾನಾಯಕ್‌, ಬೋಸ್‌ರಾಜ್‌, ಕೊಂಡಯ್ಯ ಮೊದಲಾದವರು ವಿಧಾನಪರಿಷತ್‌ ಸದಸ್ಯರಾಗಿದ್ದಕ್ಕೆ ಸಾಕ್ಷಿಯಾಗಬೇಕಾಯಿತು. ಹಾಗಂತ ರಾಮಚಂದ್ರಪ್ಪ ಕೊರಗಿದ್ದು ಕಡಿಮೆ, ಪಕ್ಷದ ಕೆಲಸಕ್ಕೆ ಸದಾ ಮುಂದೆ. ಕಾಂಗ್ರೆಸ್‌ನಲ್ಲಿ ಅಜಾತಶತ್ರು ಎನಿಸಿದ ರಾಮಚಂದ್ರಪ್ಪ ಅವರು ತಮ್ಮ ಕೈಲಾದ ಪಕ್ಷದ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ.

ಹಲವು ಬಾರಿ ಸ್ಥಾನ-ಮಾನ ಪಡೆಯುವ ಹಂತಕ್ಕೆ ಬಂದಿದ್ದರೂ ಅದು ಅವರಿಗೆ ಮರೀಚಿಕೆಯಾಗಿದೆ. ಈ ಬಾರಿ ಕಾಂಗ್ರೆಸ್‌ ನಾಯಕತ್ವ ಮನಸ್ಸು ಮಾಡಿದರೆ ಕಾಂಗ್ರೆಸ್‌ನ ಕಟ್ಟಾಳು ಎನಿಸಿಕೊಂಡ ರಾಮಚಂದ್ರಪ್ಪ ಅವರಿಗೆ ವಿಧಾನಪರಿಷತ್‌ ಸದಸ್ಯರನ್ನಾಗಿಸುವ ಎಲ್ಲಾ ಅವಕಾಶವಿದೆ. ಜಾತಿ ಹಾಗೂ ಅರ್ಹತೆ ಆಧಾರದ ಮೇಲೆ ರಾಮಚಂದ್ರಪ್ಪ ಅವರನ್ನು ಸುಲಭವಾಗಿ ಪರಿಗಣಿಸಬಹುದು. ಹೀಗೆ ಪರಿಗಣಿಸಬೇಕು ಎಂಬ ತೀವ್ರ ಒತ್ತಡವೂ ಇದೆ. ಅಂತಿಮವಾಗಿ ಕಾಂಗ್ರೆಸ್‌ ನಾಯಕತ್ವ ಕಾಂಗ್ರೆಸ್‌ ಕಟ್ಟಾಳುವಿಗೆ ನ್ಯಾಯ ಕೊಡುವುದೇ ಎಂಬುದನ್ನು ಕಾದು ನೋಡಬೇಕು.

Follow Us:
Download App:
  • android
  • ios