ಉಳ್ಳವರು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿಯನ್ನು ತ್ಯಜಿಸಲು ಅವಕಾಶ ಕಲ್ಪಿಸಿದ್ದ ಕೇಂದ್ರ ಸರ್ಕಾರ ಇದೀಗ ಎಲ್ಲ ಗ್ರಾಹಕರ ಸಬ್ಸಿಡಿಯನ್ನೂ ಕಸಿದುಕೊಳ್ಳುವ ಕಸರತ್ತನ್ನು ಸದ್ದಿಲ್ಲದೆ ಆರಂಭಿಸಿದೆ. ಇದರಿಂದಾಗಿ ಈಗಾಗಲೇ ಗ್ರಾಹಕರು 24 ರು.ಗೂ ಅಧಿಕ ಸಬ್ಸಿಡಿಯನ್ನು ಕಳೆದುಕೊಂಡಿದ್ದಾರೆ.

ನವದೆಹಲಿ(ಆ.01): ಉಳ್ಳವರು ಅಡುಗೆ ಅನಿಲ ಸಿಲಿಂಡರ್ ಸಬ್ಸಿಡಿಯನ್ನು ತ್ಯಜಿಸಲು ಅವಕಾಶ ಕಲ್ಪಿಸಿದ್ದ ಕೇಂದ್ರ ಸರ್ಕಾರ ಇದೀಗ ಎಲ್ಲ ಗ್ರಾಹಕರ ಸಬ್ಸಿಡಿಯನ್ನೂ ಕಸಿದುಕೊಳ್ಳುವ ಕಸರತ್ತನ್ನು ಸದ್ದಿಲ್ಲದೆ ಆರಂಭಿಸಿದೆ. ಇದರಿಂದಾಗಿ ಈಗಾಗಲೇ ಗ್ರಾಹಕರು 24 ರು.ಗೂ ಅಧಿಕ ಸಬ್ಸಿಡಿಯನ್ನು ಕಳೆದುಕೊಂಡಿದ್ದಾರೆ.

ಮುಂದಿನ ಮಾರ್ಚ್‌ನೊಳಗೆ ಸಿಲಿಂಡರ್ ಸಬ್ಸಿಡಿಯನ್ನು ರದ್ದುಪಡಿಸುವ ಗುರಿ ಹಾಕಿಕೊಂಡಿರುವ ಕೇಂದ್ರ ಸರ್ಕಾರ, ಅದನ್ನು ತಲುಪಲು ಪ್ರತಿ ತಿಂಗಳೂ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯನ್ನು 4 ರು.ನಂತೆ ಹೆಚ್ಚಿಸುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಆದೇಶವೊಂದನ್ನು ಹೊರಡಿಸಿದೆ. ಹೀಗಾದಲ್ಲಿ ಮುಂದಿನ ಮಾರ್ಚ್‌ನಿಂದ ಸಿಲಿಂಡರ್ ಖರೀದಿಸಿದ ಗ್ರಾಹಕರ ಖಾತೆಗೆ ಯಾವುದೇ ಸಬ್ಸಿಡಿ ಮೊತ್ತ ಸಂದಾಯವಾಗುವುದಿಲ್ಲ.

ಸಬ್ಸಿಡಿ ಹಾಗೂ ಸಬ್ಸಿಡಿರಹಿತ ಸಿಲಿಂಡರ್‌ಗಳ ಬೆಲೆ ಎರಡೂ ಒಂದೇ ಆಗಿರುತ್ತದೆ. 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಮಾಸಿಕ 2 ರು. (ವ್ಯಾಟ್ ಹೊರತು ಪಡಿಸಿ) ಹೆಚ್ಚಳ ಮಾಡುವ ಪ್ರಕ್ರಿಯೆ ಕಳೆದೊಂದು ವರ್ಷದಿಂದ ಜಾರಿಯಲ್ಲಿದೆ. ಅದನ್ನು ಈಗ 4 ರು.ಗೆ ಹೆಚ್ಚಳ ಮಾಡಿದ್ದು, ಪ್ರತಿ ತಿಂಗಳು ಹೆಚ್ಚಳ ಮಾಡು ವಂತೆ ಐಒಸಿ, ಬಿಪಿಸಿಎಲ್ ಹಾಗೂ ಎಚ್‌ಪಿಸಿಎಲ್ ಕಂಪನಿಗಳಿಗೆ ಸೂಚಿಸಲಾಗಿದೆ. ಸಬ್ಸಿಡಿಯನ್ನು ಶೂನ್ಯ ಮಟ್ಟಕ್ಕೆ ನಿಲ್ಲಿಸುವ ಸಲುವಾಗಿ ಮೊತ್ತವನ್ನು ದ್ವಿಗುಣ ಗೊಳಿಸಲಾಗಿದೆ ಎಂದು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತೈಲ ಸಚಿವ ಧರ್ಮೇಂದ್ರ ಪ್ರದಾನ್ ಸೋಮವಾರ ತಿಳಿಸಿದ್ದಾರೆ.

ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯನ್ನು ಮಾಸಿಕ 2 ರು.ನಷ್ಟು ಹೆಚ್ಚಳ ಮಾಡಲು ತೈಲ ಕಂಪನಿಗಳಿಗೆ ಸೂಚಿಸಲಾಗಿತ್ತು. 2016ರ ಜು.1ರಿಂದಲೇ ಆ ಪ್ರಕ್ರಿಯೆ ಜಾರಿಯಲ್ಲಿದ್ದು, ಈವರೆಗೆ 10 ಬಾರಿ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿವೆ. 2017ರ ಮೇ 30ರಂದು ಮತ್ತೊಂದು ಆದೇಶ ಹೊರಡಿಸಿ, ಜೂ.1ರಿಂದಲೇ ಜಾರಿಗೆ ಬರುವಂತೆ ಸಿಲಿಂಡರ್ ಬೆಲೆಯನ್ನು 4 ರು. (ವ್ಯಾಟ್ ಪ್ರತ್ಯೇಕ) ಹೆಚ್ಚಳ ಮಾಡುವಂತೆ ಸೂಚಿಸಲಾಗಿದೆ.

ಸಬ್ಸಿಡಿ ಶೂನ್ಯ ಮಟ್ಟಕ್ಕೆ ಇಳಿಯುವವರೆಗೆ ಅಥವಾ 2018ರ ಮಾರ್ಚ್‌ವರೆಗೆ ಅಥವಾ ಮುಂದಿನ ಆದೇಶದ ಪೈಕಿ ಯಾವುದು ಮೊದಲೋ ಅಲ್ಲಿವರೆಗೂ ಇದು ಅನ್ವಯವಾಗುತ್ತದೆ. ಆ ಆದೇಶದಂತೆ ಈಗಾಗಲೇ ತೈಲ ಕಂಪನಿಗಳು ಎರಡು ಬಾರಿ ಬೆಲೆ ಹೆಚ್ಚಳ ಮಾಡಿವೆ ಎಂದು ತಿಳಿಸಿದ್ದಾರೆ. ದೇಶದಲ್ಲಿ 18.11 ಕೋಟಿ ಗ್ರಾಹಕರು ಸಬ್ಸಿಡಿಸಹಿತ ಅಡುಗೆ ಅನಿಲ ಬಳಸುತ್ತಿದ್ದಾರೆ. ಈ ಪೈಕಿ 2.5 ಕೋಟಿ ಬಡ ಮಹಿಳೆಯರು ಇದ್ದು, ಅವರಿಗೆಲ್ಲಾ ಉಚಿತ ಸಂಪರ್ಕ ಒದಗಿಸಲಾಗಿದೆ. ಉಳಿದಂತೆ 2.66 ಕೋಟಿ ಮಂದಿ ಸಬ್ಸಿಡಿಯೇತರ ಅಡುಗೆ ಅನಿಲ ಬಳಕೆ ಮಾಡುತ್ತಿದ್ದಾರೆ.