ನವದೆಹಲಿ[ಜು.29]: ಈಗಿನ ಯುವ ಸಮುದಾಯ ತಮ್ಮ ಯಾವುದೇ ಅಭಿಪ್ರಾಯ, ಭಿನ್ನಾಭಿಪ್ರಾಯ ಸೇರಿದಂತೆ ಇನ್ನಿತರ ವಿಚಾರಗಳನ್ನು ವಾಟ್ಸಾಪ್‌, ಫೇಸ್‌ಬುಕ್‌ ವಾಲ್‌ಗಳಲ್ಲಿ ಪೋಸ್ಟ್‌ ಮಾಡುವುದು ಗೊತ್ತೇ ಇದೆ. ಆದರೆ, ಇ-ಮೇಲ್‌ ಸೇರಿದಂತೆ ಇನ್ನಿತರ ಡಿಜಿಟಲ್‌ ಸಂವಹನ ಯುಗವಾದ ಪ್ರಸ್ತುತ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ 50 ಪೈಸೆಯ ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ.

ಇತ್ತೀಚಿನ ಭಾರತೀಯ ಅಂಚೆ ಕಚೇರಿ ದಾಖಲೆ ಪ್ರಕಾರ, 2016-17ರಲ್ಲಿ 99.89 ಕೋಟಿ ಇದ್ದ ಅಂಚೆ ಪತ್ರಗಳ ಮಾರಾಟ ಸಂಖ್ಯೆ 2017-18ನೇ ಸಾಲಿನಲ್ಲಿ 106.23 ಕೋಟಿಗೆ ಏರಿಕೆಯಾಗಿದೆ. ಈ ಏರಿಕೆಗೆ ಮುಖ್ಯಕಾರಣ, ಗ್ರಾಮೀಣ ಭಾಗಗಳಲ್ಲಿ ಈಗಲೂ ಅಂಚೆ ಪತ್ರ ಬಳಕೆ ಮುಂದುವರೆದಿರುವುದು. ಅದರ ಜೊತೆಗೆ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ನಾಯಕರು ವಿವಿಧ ಉದ್ದೇಶಗಳನ್ನು ಮುಂದಿಟ್ಟುಕೊಂಡು ನಡೆಸುವ ಅಂಚೆ ಪತ್ರ ಅಭಿಯಾನ. ಇಂಥ ಅಭಿಯಾನಗಳಿಗೆ ಭಾರೀ ಪ್ರಮಾಣದ ಅಂಚೆ ಕಾರ್ಡ್‌ಗಳು ಬಳಕೆಯಾಗುತ್ತಿರುವ ಕಾರಣ ಅಂಚೆಕಾರ್ಡ್‌ಗಳ ಮಾರಾಟದಲ್ಲಿ ವರ್ಷವರ್ಷ ಏರಿಕೆ ಆಗುತ್ತಲೇ ಇದೆ.

ಆದರೆ 50 ಪೈಸೆಯ ಒಂದು ಅಂಚೆ ಕಾರ್ಡ್‌ನಿಂದ ಅಂಚೆ ಇಲಾಖೆ 7 ರುಪಾಯಿಗಿಂತಲೂ ಹೆಚ್ಚು ನಷ್ಟಅನುಭವಿಸುತ್ತಿದೆ. ಜನಸಾಮಾನ್ಯರಿಗೂ ಸುಲಭವಾಗಿ ಅಂಚೆ ಸೌಲಭ್ಯ ಸಿಗಬೇಕೆಂಬ ಕಾರಣಕ್ಕೆ ಇಂದಿಗೂ ಅಂಚೆ ಇಲಾಖೆ ಈ ಕಾರ್ಡ್‌ಗಳ ಸೇವೆ ಉಳಿಸಿಕೊಂಡಿದೆ. ಆದರೆ ಇವುಗಳನ್ನು ನಿಗದಿತ ಉದ್ದೇಶ ಬಿಟ್ಟು ಬಿಟ್ಟು ಬೇರೆ ಬೇರೆ ಕಾರಣಕ್ಕೆ ಬಳಸುತ್ತಿರುವ ಕಾರಣ, ಅಂಚೆ ಇಲಾಖೆ ಪ್ರತಿ ವರ್ಷ ಕೋಟ್ಯಂತರ ರುಪಾಯಿ ನಷ್ಟಅನುಭವಿಸುತ್ತಿದೆ.