Asianet Suvarna News Asianet Suvarna News

ಲಾಸ್ ಏಂಜಲಿಸ್ ಟೈಮ್ಸ್’ನಲ್ಲಿ ಪಾವಗಡ; ಭಾರತದ ಬಗ್ಗೆ ಮೆಚ್ಚುಗೆ

  • 'ಹಸಿರು ಇಂಧನ’ ಉತ್ಪಾದನೆ ಬಗ್ಗೆ ಭಾರತದ ಬದ್ಧತೆ ಬಗ್ಗೆ ಮೆಚ್ಚುಗೆ
  • ಪಾವಗಡದಲ್ಲಿ 7 ಲಕ್ಷ ಮನೆಗಳಿಗೆ ಬೇಕಾಗುವಷ್ಟು ಸೌರ ವಿದ್ಯುತ್ ಉತ್ಪಾದನೆ
Los Angeles Times Mentions Pavagada in its Report Admires India

ಬೆಂಗಳೂರು: ಅಮೆರಿಕಾದ ಖ್ಯಾತ ಮಾಧ್ಯಮ ಸಂಸ್ಥೆಯಾಗಿರುವ ಲಾಸ್ ಏಂಜಲಿಸ್ ಟೈಮ್ಸ್’ನಲ್ಲಿ ಪಾವಗಡ ಸೋಲಾರ್ ಪಾರ್ಕ್ ಬಗ್ಗೆ ಪ್ರಸ್ತಾಪಿಸಲಾಗಿದ್ದು, ‘ಹಸಿರು ಇಂಧನ’ ಉತ್ಪಾದನೆ ಬಗ್ಗೆ ಭಾರತದ ಬದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನುವ ಖ್ಯಾತಿ ಹೊಂದಿರುವ ಪಾವಗಡದ ಸೋಲಾರ್ ಪಾರ್ಕ್'ನ ಮೊದಲ ಹಂತದ ಯೋಜನೆಯನ್ನು  ಕಳೆದ ಮಾ.1ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

ಪಾವಗಡ ತಾಲ್ಲೂಕಿನಲ್ಲಿ ಸುಮಾರು 13 ಸಾವಿರ ಎಕರೆಯಲ್ಲಿ ನಿರ್ಮಾಣವಾಗುತ್ತಿರುವ 10 ಸಾವಿರ ಕೋಟಿ ವೆಚ್ಚದ ಸೋಲಾರ್ ಪಾರ್ಕ್ ಮೊದಲ ಹಂತದ ಕಾಮಗಾರಿಯನ್ನ ಪೂರ್ಣಗೊಳಿಸಿದೆ. ಒಟ್ಟು 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿರುವ ಸೋಲಾರ್ ಪಾರ್ಕ್ ಮೊದಲ ಹಂತದಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ತ್  ಪೂರೈಸಲು ಅಣಿಯಾಗಿದೆ. 

ಪ್ರಸ್ತುತ 13 ಸಾವಿರ ಎಕರೆ ಪ್ರದೇಶದಲ್ಲಿ 12 ಸಾವಿರ ಎಕರೆ ಪ್ರದೇಶವನ್ನು ರೈತರಿಂದ ಪಡೆದು ಕಂಪನಿಗೆ ಹಸ್ತಾಂತರಿಸಲಾಗಿದ್ದು, ಈ ಯೋಜನೆ ಪೂರ್ಣಗೊಂಡಾಗ ಸುಮಾರು 7 ಲಕ್ಷ ಮನೆಗಳಿಗೆ ಬೇಕಾಗುವಷ್ಟು ಸೌರ ವಿದ್ಯುತ್ ಉತ್ಪಾದನೆಯಾಗಲಿದೆ.   

ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಗ್ಗೆ ಭಾರತದ ಬದ್ಧತೆಗೆ ಲೇಖನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದು, ಮರಳಿ ಕಲ್ಲಿದ್ದಲಾಧಾರಿತ ಇಂಧನ ಮೂಲಗಳ ಪುನಶ್ಚೇತನದ ಬಗ್ಗೆ ಮಾತನಾಡುತ್ತಿದೆ. ಆದರೆ ಭಾರತವು ಸೌರ ವಿದ್ಯುತ್ ಉತ್ಪಾದನೆಗೆ ಮಹತ್ವ ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ.

ಈ ತಿಂಗಳಾರಂಭದಲ್ಲಿ ‘ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್’ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಆ ಮೂಲಕ 121 ದೇಶಗಳಲ್ಲಿ ಸೌರ ಶಕ್ತಿ ಉತ್ಪಾದನೆಯನ್ನು ಉತ್ತೇಜಿಸಲು $1 ಟ್ರಿಲಿಯನ್ ಸಂಗ್ರಹಿಸುವ ಗುರಿ ಹೊಂದಿದೆ.  

Follow Us:
Download App:
  • android
  • ios