ಬೆಂಗಳೂರು :  ಪುಣೆಯಿಂದ ಅಣಬೆ ತರುತ್ತಿದ್ದ ಕಂಟೇನರ್‌ ಚಾಲಕನ ನಿಯಂತ್ರಣ ತಪ್ಪಿ ಯಶವಂತಪುರ ಮೇಲ್ಸೇತುವೆಯಿಂದ ಉರುಳಿಬಿದ್ದು, ಚಾಲಕ ಸೇರಿ ಇಬ್ಬರು ಅಸುನೀಗಿರುವ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.

ಕಂಟೇನರ್‌ ಚಾಲಕ ನಗರದ ಹೊರವಲಯದ ಉಲ್ಲಾಳ ನಿವಾಸಿ ಶ್ರೀನಿವಾಸಚಾರಿ (34) ಮತ್ತು ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಕ್ಲಿನರ್‌ ಕೆಂಚೇಗೌಡ (37) ಮೃತರು. ಅದೃಷ್ಟವಶಾತ್‌ ಘಟನೆ ನಡೆದ ವೇಳೆ ಮೇಲ್ಸೇತುವೆ ಕೆಳಗೆ ವಾಹನ ಬಾರದ್ದರಿಂದ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ಪೊಲೀಸರು ಹೇಳಿದರು.

ಶ್ರೀನಿವಾಸ್‌ ಮೂಲತಃ ತಮಿಳುನಾಡಿನ ಹೊಸೂರಿನವರಾಗಿದ್ದು, ಕುಟುಂಬ ಸಮೇತ ಉಲ್ಲಾಳದಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಪುಣೆಯಿಂದ ಅಣಬೆ ತುಂಬಿದ್ದ ಕಂಟೇನರ್‌ ಚಲಾಯಿಸಿಕೊಂಡು ಭಾನುವಾರ ಬೆಳಗಿನ ಜಾವ ಬೆಂಗಳೂರಿಗೆ ಬಂದಿದ್ದರು. ಬೆಳಗಿನ ಜಾವ 5.30ರ ಸುಮಾರಿಗೆ ಯಶವಂತಪುರ ಮೇಲ್ಸೇತುವೆ ಮೇಲೆ ಕಂಟೇನರ್‌ ಚಾಲಕನ ನಿಯಂತ್ರಣ ತಪ್ಪಿದೆ. ಕಂಟೇನರ್‌ ಮೇಲ್ಸೇತುವೆಯಿಂದ 30 ಅಡಿ ಕೆಳಕ್ಕೆ ಕಂಟೇನರ್‌ ಬಿದ್ದಿದೆ. ಕಂಟೇನರ್‌ ಚಾಲಕ ಶ್ರೀನಿವಾಸಚಾರಿ ಸ್ಥಳದಲ್ಲಿಯೇ ಮೃಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕೆಂಚೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.

ಕಂಟೇನರ್‌ನಲ್ಲಿದ್ದ ಅಣಬೆ ನಾಪತ್ತೆ!

ಅಪಘಾತದ ವೇಳೆ ಕಂಟೇನರ್‌ನಲ್ಲಿದ್ದ ಅಣಬೆ ಪ್ಯಾಕೇಟ್‌ಗಳು ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿದ್ದಿದ್ದವು. ಘಟನೆ ನಡೆದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು, ನೂರಾರು ಜನ ಬಂದು ಅಣಬೆ ಪ್ಯಾಕೇಟ್‌ ತುಂಬಿಕೊಂಡು ಹೋದರು. ಪೊಲೀಸರು ಸ್ಥಳಕ್ಕೆ ಬರುಷ್ಟರಲ್ಲಿ ಕಂಟೇನರ್‌ನಲ್ಲಿದ್ದ ಅಣಬೆಗಳೆಲ್ಲಾ ಖಾಲಿಯಾಗಿದ್ದವು.

90 ಡಿಗ್ರಿ ತಿರುವಿನಿಂದಾಗಿ ಅನಾಹುತ?

2017 ರಲ್ಲೂ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸಿತ್ತು. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ. ಕೋಳಿಗಳು ತುಂಬಿಕೊಂಡಿದ್ದ ಟ್ರಕ್‌ವೊಂದು ಇದೇ ಸ್ಥಳದಿಂದ ಕೆಳಗೆ ಬಿದ್ದಿತ್ತು. ಮೇಲ್ಸೇತುವೆಯ ಈ ಬ್ಲಾಕ್‌ ಸ್ಪಾಟ್‌ನಲ್ಲಿ ತಿರುವು ಇದೆ. ಅದು 90 ಡಿಗ್ರಿಯಷ್ಟಿದ್ದು, ವಾಹನಗಳು ಅತಿವೇಗದಲ್ಲಿ ಬಂದರೆ ನಿಯಂತ್ರಣಕ್ಕೆ ಸಿಗುವುದು ಕಷ್ಟ. ಹಗಲು ಹೊತ್ತಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ನಿಗಧಿತ ವೇಗ ಮಿತಿಗಿಂತ ಚಲಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ವಾಹನದ ಮೇಲಿನ ನಿಯಂತ್ರಣ ಕೈ ತಪ್ಪುವುದಿಲ್ಲ. ಆದರೆ ಬೆಳಗಿನ ಜಾವದಲ್ಲಿ ಅನಾಹುತ ಆಗುತ್ತವೆ.