ಹರಾರೆ[ಸೆ.07]: 37 ವರ್ಷಗಳ ಕಾಲ ಜಿಂಬಾಬ್ವೆಯನ್ನು ತನ್ನ ಬಿಗಿ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮಾಜಿ ಅಧ್ಯಕ್ಷ ರಾಬರ್ಟ್‌ ಮುಗಾಬೆ (95) ಸಿಂಗಾಪುರದಲ್ಲಿ ನಿಧನರಾಗಿದ್ದಾರೆ. ಮುಗಾಬೆ ನಿಧನ ಸುದ್ದಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಜಿಂಬಾಬ್ವೆಯ ವಿಮೋಚಕ, ಸ್ವಾತಂತ್ರ್ಯ ಹೋರಾಟಗಾರ ಎಂದೇ ಪ್ರಶಂಸೆಗೆ ಪಾತ್ರರಾಗಿದ್ದ ಮುಗಾಬೆ ತಮ್ಮ ಆಡಳಿತದ ಅವಧಿಯಲ್ಲಿ ಸರ್ವಾಧಿಕಾರಿಯಾಗಿ ಬದಲಾಗಿದ್ದರು. ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ಅಸಮರ್ಥತೆಯಿಂದ ರೋಸಿ ಹೋಗಿದ್ದ ಜನರು ದಂಗೆ ಎದ್ದಿದ್ದರು. 2017ರಲ್ಲಿ ಸೇನಾ ಕ್ಷಿಪ್ರಕ್ಷಾಂತಿಗೆ ಮಣಿದು ಅಧಿಕಾರದಿಂದ ಕೆಳಗಿಳಿದಿದ್ದ ಮುಗಾಬೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಸಿಂಗಾಪುರದಲ್ಲಿ ಮುಗಾಬೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

1924 ಫೆ.21ರಂದು ರೊಡೇಶಿಯಾದಲ್ಲಿ ಜನಿಸಿದ ಮುಗಾಬೆ, ವಿಮೋಚನೆಯ ಪ್ರತೀಕವಾಗಿದ್ದರು. ರೊಡೇಶಿಯಾವನ್ನು ಬ್ರಿಟಿಷ್‌ ಆಡಳಿತದಿಂದ ಮುಕ್ತಗೊಳಿಸಿದ್ದರು. ಬ್ರಿಟನ್‌ನಿಂದ ಜಿಂಬಾಬ್ವೆ 1980ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಮುಗಾಬೆ ಅಧಿಕಾರದ ಚುಕ್ಕಾಣಿ ಹಿಡಿದರು. ಕರಿಯರಿಗೆ ಆರೋಗ್ಯ ಸೇವೆ ಹಾಗೂ ಸಮಾನ ಶಿಕ್ಷಣ ಒದಗಿಸಿದ ಕಾರಣಕ್ಕೆ ಮುಗಾಬೆ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ, ತಮ್ಮ ಅಧಿಕಾರದ ಅವಧಿಯಲ್ಲಿ ರಾಜಕೀಯ ವಿರೋಧಿಗಳ ಸದ್ದಡಗಿಸಿದ್ದರು. ಸರ್ಕಾರದ ವಿರುದ್ಧ ಧ್ವನಿ ಎತ್ತಿದ 20,000 ಸಾವಿರಕ್ಕೂ ಅಧಿಕ ಭಿನ್ನಮತೀಯರನ್ನು ಕೊಲ್ಲಿಸಿದ ಆರೋಪಕ್ಕೆ ಗುರಿಯಾಗಿದ್ದರು. ಅಲ್ಲದೇ ಮುಗಾಬೆ ಆಡಳಿತದಲ್ಲಿ ಜಿಂಬಾಬ್ವೆ ಆರ್ಥಿಕತೆ ಹೀನಾಯ ಸ್ಥಿತಿ ತಲುಪಿತ್ತು.

ವೈಭವೋಪೇತ ಹುಟ್ಟುಹಬ್ಬ ಆಚರಣೆ:

ಜಿಂಬಾಬ್ವೆ ಆರ್ಥಿಕ ಸಂಕಷ್ಟಎದುರಿಸುತ್ತಿದ್ದರೂ, ಮುಗಾಬೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಪ್ರತಿ ವರ್ಷ ಫೆಬ್ರವರಿಯಲ್ಲಿ ಜಿಂಬಾಬ್ವೆಯ ವಿವಿಧ ಸ್ಥಳಗಳಲ್ಲಿ ಅದ್ಧೂರಿಯಾಗಿ ಮುಗಾಬೆ ಜನ್ಮದಿನದ ಪಾರ್ಟಿ ಏರ್ಪಡಿಸಲಾಗುತ್ತಿತ್ತು. ದೊಡ್ಡ ದೊಡ್ಡ ಕೇಕ್‌ಗಳನ್ನು ಕತ್ತರಿಸಲಾಗುತ್ತಿತ್ತು. ಈ ಪಾರ್ಟಿಗೆ ಸಾವಿರಾರು ಅತಿರ್ಥಿಗಳಿಗೆ ಆಹ್ವಾನ ನೀಡಲಾಗುತ್ತಿತ್ತು. ಅತಿಥಿಗಳನ್ನು ಉದ್ದೇಶಿಸಿ ಮುಗಾಬೆ ಕ್ರಾಂತಿಕಾರಿ ಭಾಷಣ ಮಾಡುತ್ತಿದ್ದರು.