ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನ ಗೆದ್ದಿದ್ದ ಬಿಜೆಪಿ 2019ರಲ್ಲಿ ತನ್ನ ಬಲವನ್ನು 303ಕ್ಕೆ ಏರಿಸಿದೆ. ವಿಶೇಷವೆಂದರೆ ಹೀಗೆ ಅದು ಹೆಚ್ಚುವರಿಯಾಗಿ ಗೆದ್ದ 21 ಸೀಟುಗಳ ಪೈಕಿ 10 ಸೀಟುಗಳು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಮೀಸಲಿಟ್ಟಕ್ಷೇತ್ರಗಳಿಂದ ಬಂದದ್ದು. 

ದೇಶಾದ್ಯಂತ ಒಟ್ಟು 131 ಕ್ಷೇತ್ರಗಳನ್ನು ಎಸ್‌ಸಿ/ ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆಂದು ಮೀಸಲಿಡಲಾಗಿದೆ. ಈ ಪೈಕಿ ಬಿಜೆಪಿ 2014ರಲ್ಲಿ 67 ಸ್ಥಾನ ಗೆದ್ದಿತ್ತು. ಈ ಬಾರಿ ಅದು 77 ಸ್ಥಾನ ಗೆದ್ದುಕೊಂಡಿದೆ. 

ಅಂದರೆ ಈ ಬಾರಿ ಎಸ್‌ಸಿ/ಎಸ್‌ಟಿ ಸಮುದಾಯದ ಮತ ಪಡೆಯಲೂ ಬಿಜೆಪಿ ಸಫಲವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪರಿಶಿಷ್ಠ ಜಾತಿಗೆ ಮೀಸಲಿಟ್ಟ84 ಕ್ಷೇತ್ರಗಳ ಪೈಕಿ ಬಿಜೆಪಿ 46ರಲ್ಲಿ ಗೆದ್ದಿದೆ. ಈ ಪೈಕಿ ಹೆಚ್ಚಿನವು ಉತ್ತರ ಪ್ರದೇಶ (14), ಪ.ಬಂಗಾಳ (5) ಕರ್ನಾಟಕ (5), ಮಧ್ಯಪ್ರದೇಶ (4) ಮತ್ತು ರಾಜಸ್ಥಾನ (4) ದಿಂದ ಬಂದಿದೆ. ಇನ್ನು ಪರಿಶಿಷ್ಟಪಂಗಡಕ್ಕೆ ಮೀಸಲಿಟ್ಟ31 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. 

ಕರ್ನಾಟಕ, ರಾಜಸ್ಥಾನ ಮತ್ತು ಗುಜರಾತಿನಲ್ಲಿ ಎಸ್‌ಸಿ/ಎಸ್‌ಟಿಗೆ ಮೀಸಲಿಟ್ಟಎಲ್ಲಾ ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದೇ ವೇಳೆ ಕಾಂಗ್ರೆಸ್‌ ಈ ಬಾರಿ ಮೂರು ಮೀಸಲು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ.