ಮಂಗಳೂರು[ಮಾ.07]: ಕರಾವಳಿ ಜನರ ಸಮಸ್ಯೆ ಕುರಿತು ಪಾರ್ಲಿಮೆಂಟ್‌ನಲ್ಲಿ ಬಾಯಿ ಬಿಡದ, ಜಿಲ್ಲೆಗೆ ಬೆಂಕಿ ಹಾಕುವ ಹೇಳಿಕೆ ನೀಡಿ ಕೋಮು ಸಾಮರಸ್ಯ ಹಾಳು ಮಾಡುವ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಮತ್ತೆ ಎಂಪಿ ಮಾಡಬೇಕಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಗರದ ಹೊರವಲಯದಲ್ಲಿ ನಡೆದ ಕಾಂಗ್ರೆಸ್‌ ಪರಿವರ್ತನಾ ಯಾತ್ರೆ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶತಾಯಗತಾಯ ನಳಿನ್‌ ಕುಮಾರ್‌ ಉಪಯೋಗಕ್ಕೆ ಬಾರದ ವ್ಯಕ್ತಿ. ಒಂದೇ ಒಂದು ದಿನ ಪಾರ್ಲಿಮೆಂಟಲ್ಲಿ ಬಾಯಿ ಬಿಟ್ಟಿಲ್ಲ. ನಾನು ಸಿಎಂ ಆಗಿದ್ದಾಗ ಅಡಕೆ ಕೊಳೆರೋಗಕ್ಕೆ ಪರಿಹಾರ ನೀಡಿದೆ. ನಳಿನ್‌ ಏನು ಮಾಡಿದ್ದಾರೆ? ಇವರಿಗೆ ಬೆಂಕಿ ಹಚ್ಚೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಇಲ್ಲಿನ ಜನ ಪ್ರಜ್ಞಾವಂತರು ಅಂದುಕೊಂಡಿದ್ದೇನೆ. ನಳಿನ್‌ ಕುಮಾರ್‌ರಂಥ ನಿಷ್ೊ್ರಯೋಜಕ ವ್ಯಕ್ತಿಗೆ ಮತ್ತೆ ವೋಟು ಹಾಕಬೇಡಿ ಎಂದರು. ಸಂಘ ಪರಿವಾರದ ಲ್ಯಾಬ್‌ನಲ್ಲಿ ತಯಾರಾದ ವ್ಯಕ್ತಿ ನಳಿನ್‌ ಕುಮಾರ್‌. ಕೋಮು ಗಲಭೆ ಪ್ರಚೋದಕ. ಇವರಂತೆಯೇ ಅನಂತ ಹೆಗಡೆ, ಪ್ರತಾಪ್‌ ಸಿಂಹ, ಶೋಭಾ ಕರಂದ್ಲಾಜೆ ಕೂಡ. ತಮ್ಮ ಕ್ಷೇತ್ರಗಳಿಗೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಮೋದಿ ಬಣ್ಣದ ಮಾತಿಗೆ ಬಲಿಯಾಗ್ಬೇಡಿ:

ನರೇಂದ್ರ ಮೋದಿ 5 ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಒಂದು ದಿನವೂ ಚರ್ಚೆ ಮಾಡಿಲ್ಲ. ಏಕೆಂದರೆ ಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಮಾತಿನಂತೆ ನಡ್ಕೊಂಡಿದ್ದೇನೆ ಎಂದು ಹೇಳಲು ನೈತಿಕತೆಯಿಲ್ಲ. ಹಿಂದೆ ಜನರನ್ನು ಮರುಳು ಮಾಡಿ ಗೆದ್ದರು. ಈಗ ಮತ್ತೆ ಭಾವನಾತ್ಮಕ ವಿಚಾರಗಳನ್ನು ಹೇಳಿ ಲಾಭ ಪಡೆಯಲು ಯತ್ನಿಸ್ತಿದ್ದಾರೆ. ಮೋದಿಯ ಬಣ್ಣದ ಮಾತಿಗೆ ಮತ್ತೆ ಬಲಿಯಾಗಬೇಡಿ ಎಂದು ತಿಳಿಸಿದರು.

ನಾಮದ ಬಗ್ಗೆ ಸಿದ್ದು ಸ್ಪಷ್ಟನೆ:

ನಾಮ ಹಾಕಿದವರನ್ನು ನೋಡಿದ್ರೆ ಭಯ ಆಗುತ್ತೆ ಎಂಬ ಹೇಳಿಕೆಯನ್ನು ನಾನು ಯಾವ ಕಾಂಟ್ರಾಸ್ಟ್‌ನಲ್ಲಿ ಹೇಳಿದ್ದೇನೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ನಾನು ಹೇಳಿದ್ದು ಬಿಜೆಪಿಯವರು ಹಾಕಿಕೊಳ್ಳುವ ನಾಮದ ಬಗ್ಗೆ. ಅಂಥವರನ್ನು ಕಂಡರೆ ನನಗೆ ಭಯ ಅಂತ ಹೇಳಿದ್ದೆ ಎಂದು ಸ್ಪಷ್ಟಪಡಿಸಿದರು.