ನವದೆಹಲಿ: ಚುನಾವಣೆ ಆರಂಭಕ್ಕೆ ಮುನ್ನ, ಚುನಾವಣೆ ವೇಳೆ ವಿಪಕ್ಷಗಳು ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದು ಹಳೆಯ ವಿಷಯ. ಇದೀಗ ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾದರೂ, ಇವಿಎಂಗಳ ಕುರಿತು ಅನುಮಾನ ಇನ್ನೂ ದೂರವಾಗಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅನುಮಾನ ನೀಗಿಸಬೇಕಾದ ಚುನಾವಣಾ ಆಯೋಗವೇ ಮೌನಕ್ಕೆ ಶರಣಾಗಿರುವುದು ವಿಪಕ್ಷಗಳ ಅನುಮಾನವನ್ನು ಹೆಚ್ಚಿಸಿದೆ.

ಇಷ್ಟೆಲ್ಲಾ ವಿಷಯಕ್ಕೆ ಕಾರಣವಾಗಿರುವುದು ಮೊದಲ 4 ಹಂತದ ಚುನಾವಣೆಯಲ್ಲಿ ಚಲಾವಣೆ ಆದ ಮತಗಳನ್ನು ‘ಕ್ವಿಂಟ್’ ವೆಬ್ ಸೈಟ್ ವಿಶ್ಲೇಷಣೆ ಒಳಪಡಿಸಿದಾಗ ಕಂಡುಬಂದ ಅಚ್ಚರಿಯ ಎಡವಟ್ಟು. ಲೋಕಸಭೆಗೆ ನಡೆದ ಮೊದಲ 4 ಹಂತದ ಚುನಾವಣೆಯಲ್ಲಿ 370 ಕ್ಷೇತ್ರಗಳಿಗೆ ಮತದಾನವಾಗಿತ್ತು. ಈ ಪೈಕಿ ಹಲವು ಕ್ಷೇತ್ರಗಳಲ್ಲಿ ಚಲಾವಣೆ ಆಗಿರುವ ಮತಕ್ಕೂ, ಇವಿಎಂಗಳಲ್ಲಿ ಕಂಡುಬಂದಿರುವ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. 

220 ಕ್ಷೇತ್ರಗಳಲ್ಲಿ  ಹೆಚ್ಚುವರಿ ಮತದ ಲೆಕ್ಕ ಕಂಡುಬಂದಿದ್ದರೆ, ಉಳಿದ ಕಡೆ ಕಡಿಮೆ ಮತ ಚಲಾವಣೆಯ ಲೆಕ್ಕ ಸಿಕ್ಕಿದೆ. ಸಾವಿರಾರು ಸಂಖ್ಯೆಯಲ್ಲಿ ಮತಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರೂ, ಆಯೋಗ ಈ ಕುರಿತು ಸೂಕ್ತ ಉತ್ತರ ನೀಡುವಲ್ಲಿ ವಿಫಲವಾಗಿದೆ. ಉದಾಹರಣೆಗೆ ತಮಿಳುನಾಡಿನ ಕಾಂಚೀಪುರಂನಲ್ಲಿ  12, 14,086 ಮತ ಚಲಾವಣೆ ಆಗಿತ್ತು, ಆದರೆ ಇವಿಎಂನಲ್ಲಿ 12,32,417 ಮತಗಳ ಲೆಕ್ಕ ಸಿಕ್ಕಿತ್ತು. ಅಂದರೆ 18,331 ಮತಗಳು ಹೆಚ್ಚು. ಇದೇ ರೀತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಲೆಕ್ಕಚಾರದಲ್ಲಿ ಗಂಭೀರ ಲೋಪ ಕಂಡುಬಂದಿದೆ. 

ಈ ಬಗ್ಗೆ ಕ್ವಿಂಟ್ ಚುನಾವಣಾ ಆಯೋಗದ ಬಳಿ ಸ್ಪಷ್ಟನೆ ಕೇಳಿತ್ತಾದರೂ, ಆಯೋಗದ ಕಡೆಯಿಂದ ಸ್ಪಷ್ಟ ಉತ್ತರ ಬಂದಿಲ್ಲ.